ಕಪ್ಪು ಬಂಗಾರ ಧಾರಣೆ ಏರಿಕೆ PEPPER

ಜಾಗತಿಕ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿ * ಕಾಳುಮೆಣಸು ಕೆ.ಜಿ.ಗೆ 600- 730 ರೂ.
black pepper
ಕಾಳುಮೆಣಸು
Published on: 

ಪುತ್ತೂರು: ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಅಭಾವ ಸೃಷ್ಟಿಯಾಗಿರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಇದು ಪರೋಕ್ಷವಾಗಿ ಭಾರತದ ಕಾಳುಮೆಣಸಿನ ಮಾರುಕಟ್ಟೆ ಚೇತರಿಕೆ ಕಾಣಿಸಿಕೊಳ್ಳುವಂತೆ ಮಾಡಿದೆ. ಧಾರಣೆ ಹೆಚ್ಚಾಗುತ್ತಿದ್ದು, ಇನ್ನಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಬೆಳೆಗಾರರು ಕಾಳುಮೆಣಸನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ. ದೀಪಾವಳಿ ಸಮಯದಲ್ಲಿ ಕಾಳುಮೆಣಸು ಧಾರಣೆ ಹೆಚ್ಚಾಗುವುದು ಸಹಜ ಎಂಬ ಅಭಿಪ್ರಾಯ ಮಾರುಕಟ್ಟೆ ತಜ್ಞರದು.

ಮಸಾಲೆಗಳ ರಾಜ ಎಂದು ಕರೆಯಲ್ಪಡುವ ಕಾಳುಮೆಣಸು ಭಾರತದ ಪ್ರಮುಖ ಸಾಂಬಾರು ಬೆಳೆ. ವಿಾುಟ್ನಾಂನಲ್ಲಿ ದಾಸ್ತಾನು ಕಡಿಮೆಯಾಗಿರುವುದರಿಂದ ಅಂತಾರಾಷ್ಟ್ರೀಯ ಖರೀದಿದಾರರು ಮತ್ತು ಯುರೋಪ್‌, ಅಮೆರಿಕದ ಮಸಾಲೆ ಕಂಪನಿಗಳು ಭಾರತೀಯ ಕಾಳುಮೆಣಸಿನತ್ತ ಮುಖ ಮಾಡುತ್ತಿರುವುದು ಧಾರಣೆ ಹೆಚ್ಚಳಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇದರ ಜತೆಗೆ ಆಯುರ್ವೇದ ಹಾಗೂ ಔಷಧೀಯ ವಲಯದಲ್ಲಿ ಕಾಳುಮೆಣಸಿನ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.

* ಇಳುವರಿ ಇಳಿಕೆ-ದರ ಏರಿಕೆ: ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ ಮತ್ತು ಶಿಲೀಂಧ್ರ ರೋಗಗಳ (ಸೊರಗು ರೋಗ) ಕಾರಣದಿಂದ ನಿರೀಕ್ಷಿತ ಪ್ರಮಾಣದ ಇಳುವರಿ ಸಿಗದಿರುವುದು ದರ ಏರಿಕೆಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಉತ್ತಮ ತೂಕವಿರುವ ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಸಾಮಾನ್ಯ ದರಕ್ಕಿಂತ 30 ರಿಂದ 50 ರೂ. ಅ˜ಕ ದರ ಸಿಗುವುದು ಸಹಜ. ಜಾಗತಿಕ ಪೂರೈಕೆ ಸ್ಥಿರವಾಗುವವರೆಗೆ ಮಾರುಕಟ್ಟೆಯಲ್ಲಿ ದರ ಏರಿಕೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಚೀನಾ, ಅಮೆರಿಕ, ಯುರೋಪ್‌ ಮತ್ತು ಮಧ್ಯಪ್ರಾಚ್ಯ ದೇಶಗಳು ವಿಯೆಟ್ನಾಂನಿಂದ ಅಪಾರ ಪ್ರಮಾಣದಲ್ಲಿ ಕಾಳುಮೆಣಸನ್ನು ಆಮದು ಮಾಡಿಕೊಳ್ಳುತ್ತಿವೆ. ಉತ್ಪಾದನೆ ಕಡಿಮೆಯಾಗಿದ್ದರೂ ರಫ್ತು ಬೇಡಿಕೆ ಹೆಚ್ಚಾಗಿದ್ದರಿಂದ ವಿಯೆಟ್ನಾಂನ ಗೋದಾಮುಗಳು ಬೇಗ ಖಾಲಿ ಆಗಬಹುದೆಂಬ ವಿಶ್ಲೇಷಣೆಗಳೂ ಮಾರುಕಟ್ಟೆಯಲ್ಲಿ ವ್ಯತ್ಯಾಸಗಳನ್ನು ಮಾಡುತ್ತಿದೆ ಎಂಬ ಮಾತಿದೆ. ವಿಯೆಟ್ನಾಂನ ದೊಡ್ಡ ರೈತರು ತಮ್ಮ ಬಳಿ ಇರುವ ಅಲ್ಪಸ್ವಲ್ಪ ಕಾಳುಮೆಣಸನ್ನು ತಕ್ಷಣ ಮಾರುಕಟ್ಟೆಗೆ ಬಿಡದೆ ಬೆಲೆ ಮತ್ತಷ್ಟು ಹೆಚ್ಚಾಗಲಿ ಎಂದು ಕಾಯುವ ತಂತ್ರಕ್ಕೆ ಮುಂದಾಗಿದ್ದಾರೆಂಬ ಲೆಕ್ಕಾಚಾರವೂ ಇದೆ.

* ಪೂರೈಕೆಯಲ್ಲಿ ಕೊರತೆ: ಕಾಳುಮೆಣಸು ಬೆಳೆಗೆ ಮಳೆ ಹಾಗೂ ಬಿಸಿಲಿನ ಸಮತೋಲನ ಮುಖ್ಯ. ಕಾಳುಮೆಣಸು ಕೃಷಿಗೆ ಎಲ್‌ ನಿನೋ ಬಹಳಷ್ಟು ಸಮಸ್ಯೆ ತಂದೊಡ್ಡಿದೆ. ವಿಶ್ವದ ಅತಿದೊಡ್ಡ ಕಾಳುಮೆಣಸು ಉತ್ಪಾದಕ ದೇಶಗಳಾದ ವಿಯೆಟ್ನಾಂ, ಇಂಡೋನೇಷ್ಯಾ, ಬ್ರೆಜಿಲ್‌ನಲ್ಲಿ ಅನಿಯಮಿತ ಹವಾಮಾನ ಹಾಗೂ ಅತಿಯಾದ ಬಿಸಿಯಿಂದಾಗಿ ಉತ್ಪಾದನೆ ಕುಸಿದಿದೆ. ಇದರಿಂದಾಗಿ ವಿಶ್ವ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿದೆ.

ಮಾರುಕಟ್ಟೆ ಹೇಗಿದೆ?

ದಕ್ಷಿಣ ಕನ್ನಡ ಭಾಗದಲ್ಲಿ ಕೆ.ಜಿ.ಗೆ 600- 730 ರೂ. ಇದ್ದರೆ, ಉತ್ತರ ಕನ್ನಡ 670 - 750 ರೂ., ಕೊಡಗು 500 - 710ರೂ., ಚಿಕ್ಕಮಗಳೂರು/ಶಿವಮೊಗ್ಗ 600 - 715 ರೂ.ವರೆಗೆ ಧಾರಣೆಾುದೆ. ಕಾಳುಮೆಣಸಿನ ಗುಣಮಟ್ಟ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆದಿದೆಯಾ ಎಂಬುದರ ಆಧಾರದ ಮೇಲೆ ದರದಲ್ಲಿ ಏರಿಳಿತವಾಗುತ್ತದೆ.

ಪರ್ಯಾಯ ಬೆಳೆಯತ್ತ ವಿಯೆಟ್ನಾಂ!

ವಿಶ್ವದ ಅತಿದೊಡ್ಡ ಕಾಳುಮೆಣಸು ರಫ್ತುದಾರ ದೇಶವಾದ ವಿಯೆಟ್ನಾಂನಲ್ಲಿ ದಾಸ್ತಾನು ಗಣನೀಯವಾಗಿ ಇಳಿಕೆಯಾಗಿದೆ. ಎಲ್‌ ನಿನೋ ಪ್ರರಿಣಾಮದಿಂದ ತೀವ್ರ ಬರಗಾಲ ಪರಿಸ್ಥಿತಿಾುಂದ ಸತತ ಇಳುವರಿ ಕುಸಿದಿದೆ ಎನ್ನಲಾಗುತ್ತಿದೆ. ರೈತರು ಕಾಳುಮೆಣಸಿನ ತೋಟ ತೆರವುಗೊಳಿಸಿ ಹೆಚ್ಚಿನ ಆದಾಯ ಕೊಡುವ ‘ದುರಿಯನ್‌’ ಹಣ್ಣು ಹಾಗೂ ಕಾಫಿ ಬೆಳೆಯಲು ಪ್ರಾರಂಭಿಸಿರುವುದರಿಂದ ಕಾಳುಮೆಣಸು ಬೆಳೆ ಕಡಿಮೆಯಾಗಿದೆ. ಇದು ದೇಶದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ.

ದೀಪಾವಳಿಯ ವೇಳೆಗೆ ಧಾರಣೆ ಹೆಚ್ಚಾಗುವುದು ಸಹಜ. ಈ ಹಿಂದೆ 735 ರೂ.ವರೆಗೆ ಕಾಳುಮೆಣಸು ಧಾರಣೆ ಇತ್ತು. ಶ್ರೀಲಂಕಾ, ವಿಯೆಟ್ನಾಂ ಮುಂತಾದ ರಾಷ್ಟ್ರಗಳಲ್ಲಿ ಕಾಳುಮೆಣಸು ಬೆಳೆ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದ ಪ್ರಸಕ್ತ ವರ್ಷದಲ್ಲೂ ಬೆಳೆ ಕಡಿಮೆಯಾಗುವ ಲಕ್ಷಣವಿದೆ. ಈ ಎಲ್ಲ ಕಾರಣದಿಂದ ಧಾರಣೆ 750 ರೂ.ವರೆಗೆ ತಲುಪುವ ಸಾಧ್ಯತೆಯಿದೆ.
ಡಾ. ವಿಘ್ನೇಶ್ವರ ವರ್ಮುಡಿ, ಮಾರುಕಟ್ಟೆ ತಜ್ಞರು
ಕರಾವಳಿ ರೈತರು ವಿವಿಧ ರೋಗಬಾಧೆಗಳ ನಡುವೆ ಕಾಳುಮೆಣಸು ಕೃಷಿ ಮಾಡುತ್ತಿದ್ದಾರೆ. ಕೆಲವು ವರ್ಷದಿಂದ ಖಾರವಾಗಿದ್ದ ಕಾಳುಮೆಣಸು, ಕೆಲವು ದಿನಗಳಿಂದ ಕೃಷಿಕರ ಪಾಲಿಗೆ ಸಿಹಿಯನ್ನು ತರುವಂತೆ ಕಾಣುತ್ತಿದೆ. ಈಗಾಗಲೇ ಕಾಳುಮೆಣಸಿನ ಕಡೆಗೆ ರೈತರು ಹೆಚ್ಚಿನ ಒಲವನ್ನು ತೋರಿಸಿದ್ದು, ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದೆ.
ಅಶ್ವಥ್‌ ಎಂ., ಪ್ರಗತಿಪರ ಕೃಷಿಕರು