ಬಿಜೆಪಿಯವರಿಂದ ದ್ವೇಷ ಭಾಷಣದ ಕಿಚ್ಚು

ಯಶ್‌ಪಾಲ್ ಸುವರ್ಣ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ರಸ್ತೆ ಮಧ್ಯೆ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಯಶ್‌ಪಾಲ್ ಸುವರ್ಣ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ರಸ್ತೆ ಮಧ್ಯೆ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ
ಮಂಗಳೂರು: ಸಮಾಜದಲ್ಲಿ ದೊಂಬಿ, ಗಲಾಟೆ, ಘರ್ಷಣೆಯನ್ನು ಮಾಡುವವರಿಗೆ, ಸಾಮರಸ್ಯ ಕಡಡುವ, ಪ್ರಚೋದನಕಾರಿ ದ್ವೇಷದ ಭಾಷಣ ಮಾಡುವವರಿಗೆ ಬಿಜೆಪಿ ಆದ್ಯತೆಯಾಗಿದೆ. ಅಂತಹವರಿಗೇ ನಾಯಕತ್ವ ನೀಡುತ್ತಿದೆ. ಶಾಸಕ ಯಶ್‌ಪಾಲ್ ಸುವರ್ಣ ಒಬ್ಬ ಮೂಲಭೂತವಾದಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿ. ಆತನಿಂದ ಎಂದಿಗೂ ಗಾಂಧಿ ಕುಟುಂಬವನ್ನು ನಾಶ ಮಾಡುವುದು ಬಿಡಿ, ಹತ್ತಿರಕ್ಕೂ ಸುಳಿಯಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿದ ಹೇಳಿಕೆ ಖಂಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳೂರು ಪುರಭವನದ ಎದುರಿನ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗೆ ರಾಹುಲ್ ಗಾಂಧಿ ಅವರು ಬೆಂಬಲ ನೀಡಿರುವ ಕಾರಣಕ್ಕೆ ಅವರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಸುಳ್ಳು ಸುದ್ದಿಗಳನ್ನು ಹರಿಯ ಬಿಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ಜೆ. ಆರ್. ಲೋಬೋ, ನಾಯಕರಾದ ಇನಾಯತ್ ಅಲಿ, ಎಂ.ಜಿ. ಹೆಗಡೆ, ಮಿಥುನ್ ರೈ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಮಮತಾ ಗಟ್ಟಿ, ಶ್ಯಾಲೆಟ್ ಪಿಂಟೋ, ಸದಾಶಿವ ಉಳ್ಳಾಲ, ಎಂ. ಶಶಿಧರ ಹೆಗ್ಡೆ, ಎಂ.ಎಸ್. ಮಹಮ್ಮದ್, ಶುಭೋದಯ ಆಳ್ವ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕೃತಿ ದಹಿಸಿ ಆಕ್ರೋಶ

ಯಶ್‌ಪಾಲ್ ಸುವರ್ಣ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಕೊನೆಯಲ್ಲಿ ಪಕ್ಕದ ರಸ್ತೆಗೆ ಆಗಮಿಸಿದ ಎನ್‌ಎಸ್‌ಯುಐ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯದಲ್ಲೇ ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಯಶ್‌ಪಾಲ್ ವಿರುದ್ಧ ಧಿಕ್ಕಾರ ಕೂಗಿದರು.

"ಲೋಕಸಭೆಯ ಪ್ರತಿಪಕ್ಷ ನಾಯಕನಾಗಿರುವ ರಾಹುಲ್ ಗಾಂಧಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕುಟುಂಬದ ಕುಡಿಯಾಗಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ದೇಶದ ಜನರು ಕನಸು ಕಟ್ಟಿಕೊಂಡಿದ್ದಾರೆ. ಆದರೆ ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಶಾಸಕ ಯಶ್‌ಪಾಲ್ ಸುವರ್ಣ ಆಡಿರುವ ಮಾತು ಸಂವಿಧಾನ ವಿರೋಧಿ. ಮಾತ್ರವಲ್ಲದೆ ಅವರೊಬ್ಬ ದೇಶದ್ರೋಹಿ. ಬಿಜೆಪಿಯ ರೌಡಿ ಹಿನ್ನೆಲೆ ಹೊಂದಿರುವ ಶಾಸಕರು ಇವರಾಗಿದ್ದಾರೆ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ಕಿತ್ತು ಹಾಕಬೇಕು."

— ಕೆ. ಹರೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net