ಬಿಜೆಪಿ, ಆರ್‌ಎಸ್ಎಸ್‌ನಿಂದಾಗಿ ಭಯದ ವಾತಾವರಣ ಸೃಷ್ಟಿ

 ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ
ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಕಳವಳ
ಮಂಗಳೂರು: ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಸುವ ಅಂಟು ರೋಗ ಹೆಚ್ಚಾಗುತ್ತಿದೆ. ಬಿಜೆಪಿ ಮತ್ತು ಆರ್‌ಎಸ್ಎಸ್‌ನಿಂದಾಗಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೈತರು, ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹಿಗಳೆನ್ನುವುದು, ಪಾಕಿಸ್ತಾನಿಗಳು, ಬಾಂಗ್ಲನ್ನರು ಎಂದು ಕರೆಯುವುದು, ದೇಶದ್ರೋಹಿ, ಭಯೋತ್ಪಾದಕರು ಎನ್ನುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುವುದು, ವೈಯಕ್ತಿಕವಾಗಿ ನಿಂದಿಸಿ ಬೆದರಿಕೆ ಹಾಕುವುದು... ಇದನ್ನು ಕಂಡರೆ ಭಯವಾಗುತ್ತದೆ. ವೈಯಕ್ತಿಕ ತೇಜೋವಧೆ ಶೋಭೆಯಲ್ಲ. ನಕಲಿ ಖಾತೆಗಳ ಮೂಲಕ ಪೋಸ್ಟ್ ಮಾಡಿ ಎಲ್ಲೆ ಮೀರಿ ಹೋಗುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ಈ ಸಂಸ್ಕೃತಿ ಒಳ್ಳೆಯದಲ್ಲ. ಅವರ ಕ್ರಿಯೆಗೆ ನಮ್ಮವರು ಪ್ರತಿಕ್ರಿಯೆ ನೀಡಿದ್ದೂ ಉಂಟು. ಅವಾಚ್ಯವಾಗಿ ಯಾರೇ ನಿಂದಿಸುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಪ್ರಧಾನಿ ಮೋದಿ, ಆರ್‌ಎಸ್ಎಸ್‌ನ ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಅವರು ಈ ರೀತಿಯಲ್ಲ ವೈಯಕ್ತಿಕವಾಗಿ ನಿಂದಿಸಬೇಡಿ ಎಂದು ಅವರ ಕಾರ್ಯಕರ್ತರಿಗೆ ಕರೆ ನೀಡಲಿ ಎಂದರು.
ಮೋದಿಯವರು ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಬಾರದಿತ್ತು ಎಂದು ಚಲನಚಿತ್ರ ನಟ ಅನಂತ್ ಕುಮಾರ್ ಹೇಳಿರುವುದು ಖಂಡನೀಯ. ಅವರ ಕೀಳುಮಟ್ಟದ ರಾಜಕಾರಣ ಇವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಎಂ.ಜಿ. ಹೆಗಡೆ ಅವರು, "ಗುಡ್ ಗವರ್ನೆನ್ಸ್" ಎಂದು ಹೊಗಳಿ ಬಕೆಟ್ ಹಿಡಿದಿರುವುದು ಹಾಗೂ ಅಂಟು ರೋಗ ಎನ್ನುವ ಪದವನ್ನು ಬಳಸಿರುವುದು ಖಂಡನೀಯ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದವರು ಹೇಳಿದರು.
ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯಕ್, ಯುವ ಕಾಂಗ್ರೆಸ್‌ನ ರಿಷೇಲ್, ಶ್ರುತಿ, ಎನ್ಎಸ್‌ಯುಐನ ಶಾನ್ ಶಿರಿ, ಪ್ರಜ್ವಲ್, ಸಂತೋಷ್ ಸುಳ್ಯ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net