ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ, ನೇಪಥ್ಯ ಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ 9ನೇ ವರ್ಷದ ಭ್ರಾಮರೀ ಯಕ್ಷ ವೈಭವ ಕಾರ್ಯಕ್ರಮ ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆ ವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಿತು.
ಸಹಕಾರಿ ಧುರೀಣ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜರಾಮ ಭಟ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತೆಂಕು, ಬಡಗು, ಬಡಾಬಡಗು ಯಾವುದೇ ತಿಟ್ಟು ಆಗಲಿ ಯಕ್ಷಗಾನವನ್ನು ಸವಿಯದವರು ಕರಾವಳಿಯಲ್ಲಿ ಇಲ್ಲ. ಯಕ್ಷಗಾನದಲ್ಲಿ ಇಂದು ಸಾಕಷ್ಟು ಹೊಸತನಗಳು ಬಂದಿದ್ದು, ಜನರೂ ಇಷ್ಟ ಪಟ್ಟಿದ್ದಾರೆ. ಕಳೆದ ಒಂಭತ್ತು ವರ್ಷಗಳಲ್ಲಿ ಯಕ್ಷಗಾನದಲ್ಲಿ ಹಲವು ರೀತಿಯ ಸಾಹಸಗಳನ್ನು ಟ್ರಸ್ಟ್ ಮಾಡಿದೆ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಯಕ್ಷಗಾನ, ನಾಟಕ ಸಾಂಸ್ಕೃತಿಕ ರಂಗಕ್ಕೆ ಹಿನ್ನೆಲೆಯಲ್ಲಿ ರೂಪ ಕೊಡುವವರನ್ನು ಮರೆತು ಬಿಡುತ್ತೇವೆ. ಆದರೆ ಟ್ರಸ್ಟ್ ನೇಪಥ್ಯ ಕಲಾವಿದರನ್ನೂ ನೆನಪಿಸಿಕೊಂಡಿರುವುದು ಶ್ಲಾಘನೀಯ. ವಾಟ್ಸಾಪ್ ಮೂಲಕ ಬಳಗವನ್ನು ಕಟ್ಟಿಕೊಂಡು ಯಕ್ಷಗಾನ ಆಯೋಜಿಸುತ್ತಿರುವುದು ನಮ್ಮ ನಾಡಿಗೆ ಭೂಷಣ ಎಂದರು.
ಉದ್ಯಮಿ ರಾಜಶೇಖರ ಕೋಟ್ಯಾನ್ ಮಾತನಾಡಿ, ಯಕ್ಷಗಾನ ಪ್ರದರ್ಶನ ಅಲ್ಲಲ್ಲಿ ನಡೆಯುತ್ತಿದ್ದರೂ, ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಈ ಕಲೆ ಮುಂದುವರಿಯಲು ಮಕ್ಕಳಿಗೆ ಯಕ್ಷಗಾನದ ತಿಳಿಸುವ ಕೆಲಸವಾಗಬೇಕು ಎಂದರು.
ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ, ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಭ್ರಾಮರೀ ಯಕ್ಷಮಿತ್ರರು ಮಾಡುತ್ತಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಕೆ. ಭಟ್ ಸೆರಾಜೆ, ಯಕ್ಷಾಗಾನಕ್ಕೆ ಹಲವು ಆಯಾಮಗಳಲ್ಲಿ ಪೋಷಣೆ, ಸಹಕಾರ ನೀಡುವ ದೊಡ್ಡ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ. ಮಾದರಿ ಸಂಸ್ಥೆಯಾಗಿ ಟ್ರಸ್ಟ್ ಬೆಳೆದಿದೆ. ಮುಂದೆ ದಶಮಾನೋತ್ಸವ ಕಾರ್ಯಕ್ರಮವೂ ಸಂಭ್ರಮದಿಂದ ನೆರವೇರಲಿ ಎಂದರು.
ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ, ನೇಪಥ್ಯ ಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಳಗದ ಸದಸ್ಯರಾಗಿದ್ದ ರಮೇಶ್ ರೈ ತಲಪಾಡಿ ದೊಡ್ಡಮನೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಜತೆ ಕಾರ್ಯದರ್ಶಿ, ಹಾಪ್ ಕಾಮ್ಸ್ ವ್ಯವಸ್ಥಾಪಕರಾಗಿದ್ದ ರವಿಚಂದ್ರ ಶೆಟ್ಟಿ ಅಶೋಕನಗರ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಟ್ರಸ್ಟ್ ಪ್ರಮುಖರಾದ ಸತೀಶ್ ಮಂಜೇಶ್ವರ ಸ್ವಾಗತಿಸಿ, ವಿನಯಕೃಷ್ಣ ಕುರ್ನಾಡು ವಂದಿಸಿದರು.
ಲಕ್ಷ್ಮೀ ಮಚ್ಚಿನ, ಉಮೇಶ್ ಶೆಟ್ಟಿ, ಸತೀಶ್ ಇರಾ ಸಮ್ಮಾನ ಪತ್ರ ವಚಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಅಂಬಾಶಪಥ, ಲಕ್ಷ್ಮೀ ಸ್ವಯಂವರ ಮತ್ತು ತಾಮ್ರಧ್ವಜ ಕಾಳಗ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.