ಗೋ ಮಾಂಸ ಸಾಗಾಟ ಪ್ರಕರಣ ಪತ್ತೆಯಾದ ನಕಲಿ ದಾಖಲೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು : ಯಾವುದೇ ದಾಖಲೆಗಳಿಲ್ಲದೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿರುವ ಬಗ್ಗೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಕಳೆದ ಶನಿವಾರ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಮುಲ್ಲರಪಟ್ನದ ಅಬ್ದುಲ್ ಸತ್ತಾರ್ (54) ಎಂಬಾತ ದನದ ಮಾಂಸ ಸಾಗಾಟ ಮಾಡುತ್ತಿದ್ದಾಗ ಇಬ್ಬರು ಯುವಕರು ತಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸುಮಿತ್ ಭಂಡಾರಿ ಮತ್ತು ರಜತ್ ನಾಯ್ಕ ವಿರುದ್ಧ ಅನೈತಿಕ ಪೊಲೀಸ್‌ಗಿರಿ ಆರೋಪದಡಿ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಯಾವುದೇ ದಾಖಲೆಗಳಿಲ್ಲದೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬ್ದುಲ್ ಸತ್ತಾರ್ ನನ್ನು ಕೂಡ ಬಂಧಿಸಲಾಗಿತ್ತು.
ಅಬ್ದುಲ್ ಸತ್ತಾರ್ ನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಬಿಲ್ ನ್ನು ಹಾಜರುಪಡಿಸಲಾಗಿತ್ತು. ಆ ಬಿಲ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೊಲೀಸ್ ತನಿಖಾಧಿಕಾರಿಯವರು ಬಿಲ್ ಬುಕ್ ನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿರುವುದು ಗೊತ್ತಾಗಿದೆ. ಈ ಹಿನ್ನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಬಿಲ್ ಬುಕ್ ನ್ನು ಅಂಗಡಿಯಿಂದ ಜಪ್ತಿ ಮಾಡಿ ಪರಿಶೀಲಿಸಿದಾಗ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ನಕಲಿ ಬಿಲ್ ಸಲ್ಲಿಕೆಗೆ ಸಂಬಂಧಿಸಿದಂತೆ ದನದ ಮಾಂಸ ಸಾಗಾಟ ಪ್ರಕರಣದ ಆರೋಪಿ ಮುಲ್ಲರಪಟ್ನದ ಅಬ್ದುಲ್ ಸತ್ತಾರ್, ನಕಲಿ ಬಿಲ್ ನೀಡಿದ್ದ ಅಂಗಡಿ ಮಾಲೀಕ ತೊಕ್ಕೊಟ್ಟು ಚೊಂಬುಗುಡ್ಡೆ ನಿವಾಸಿ ಅಬ್ದುಲ್ ಸತ್ತಾರ್ ಚೊಂಬುಗುಡ್ಡೆ (41) ಮತ್ತು ಬಿಲ್ ಸಂಗ್ರಹಿಸಿದ ಮುಲ್ಲರ ಪಟ್ನ ನಿವಾಸಿ ಸಿಯಾಬುದ್ದೀನ್ ಆಲಿಯಾಸ್ ಸಿಯಾಬ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಅಕ್ರಮ ಗೋಸಾಗಾಟ ಮತ್ತು ನಕಲಿ ದಾಖಲೆ ಸಲ್ಲಿಸಿದ ಪ್ರಕರಣದಲ್ಲಿ ಮುಲ್ಲರಪಟ್ನದ ಅಬ್ದುಲ್ ಸತ್ತಾರ್, ನಕಲಿ ಬಿಲ್ ನೀಡಿದ ಪ್ರಕರಣದಲ್ಲಿ ಚೊಂಬುಗುಡ್ಡೆಯ ಅಬ್ದುಲ್ ಸತ್ತಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಕಲಿ ದಾಖಲೆ ಸಲ್ಲಿಸಿದ ಪ್ರಕರಣದ ಇನ್ನೋರ್ವ ಆರೋಪಿ ಸಿಯಾಬುದ್ದೀನ್ ತಲೆಮರೆಸಿಕೊಂಡಿದ್ದಾನೆ. ಗೋ ಮಾಂಸ ಸಾಗಾಟವನ್ನು ತಡೆದ ಆರೋಪದಲ್ಲಿ ಸುಮಿತ್ ಮತ್ತು ರಜತ್ ನ್ಯಾಯಾಂಗ ಬಂಧನದಲ್ಲಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net