ಚೆಂಬುಗುಡ್ಡಕ್ಕೆ ತಡೆಗೋಡೆಯ ರಕ್ಷಣೆ

ತೊಕ್ಕೊಟ್ಟು-ಚೆಂಬುಗುಡ್ಡೆ ನಡುವಿನ ಮುಖ್ಯ ರಸ್ತೆ ಬದಿಯಲ್ಲಿ ಕುಸಿಯುತ್ತಿದ್ದ ಬೃಹತ್ ಗುಡ್ಡದ ರಕ್ಷಣೆಗೆ ಕೊನೆಗೂ ತಡೆಗೋಡೆಯ ಬಲ ಸಿಗುತ್ತಿದೆ.
ಚೆಂಬುಗುಡ್ಡೆ ರಾಜರಸ್ತೆಯಲ್ಲಿರುವ ಗುಡ್ಡಕ್ಕೆ ತಡೆಗೋಡೆ ಕಾಮಗಾರಿ ನಡೆಯುತ್ತಿದೆ.
ಚೆಂಬುಗುಡ್ಡೆ ರಾಜರಸ್ತೆಯಲ್ಲಿರುವ ಗುಡ್ಡಕ್ಕೆ ತಡೆಗೋಡೆ ಕಾಮಗಾರಿ ನಡೆಯುತ್ತಿದೆ.
Published on

ಅನ್ಸಾರ್ ಇನೋಳಿ ಉಳ್ಳಾಲ

ತೊಕ್ಕೊಟ್ಟು-ಚೆಂಬುಗುಡ್ಡೆ ನಡುವಿನ ಮುಖ್ಯ ರಸ್ತೆ ಬದಿಯಲ್ಲಿ ಕುಸಿಯುತ್ತಿದ್ದ ಬೃಹತ್ ಗುಡ್ಡದ ರಕ್ಷಣೆಗೆ ಕೊನೆಗೂ ತಡೆಗೋಡೆಯ ಬಲ ಸಿಗುತ್ತಿದೆ. ಮಳೆ ಹಾನಿ ಪರಿಹಾರ ಯೋಜನೆಯಡಿ ಬಿಡುಗಡೆಯಾಗಿರುವ 3 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ನಿರಾಳರಾಗಿದ್ದಾರೆ.

ತೊಕ್ಕೊಟ್ಟಿನಿಂದ ಅಸೈಗೋಳಿವರೆಗಿನ ರಾಜರಸ್ತೆ ಅಗಲೀಕರಣ ಕಾಮಗಾರಿ ಎಂದೋ ಮುಗಿದಿದೆ. ಕಿರಿದಾದ ರಸ್ತೆ ಅಗಲೀಕರಣಗೊಡು ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಾಗಲೇ ಚೆಂಬುಗುಡ್ಡೆಯಲ್ಲಿನ ಬೃಹತ್ ಗುಡ್ಡ ಕುಸಿತ ಆರಂಭಗೊಂಡು ಚರಂಡಿ ಮುಚ್ಚಲ್ಪಟ್ಟಿತ್ತು. ಗುಡ್ಡದ ತುದಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿಯ ವಸತಿ ಸಂಕೀರ್ಣ ಸಾರ್ವಜನಿಕರ ನಿದ್ದೆ ಕೆಡಿಸುವಂತೆ ಮಾಡಿತ್ತು. ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡದ ಜತೆ ಮರ ನೆಲಕ್ಕುರುಳಲು ಶುರುವಾದ ಹಿನ್ನೆಲೆಯಲ್ಲಿ ರಸ್ತೆ ಒಂದು ಭಾಗವನ್ನೇ ಮುಚ್ಚಲಾಗಿತ್ತು. ಮರಗಳು ಮಗುಚಿ ಬೀಳುವ ಸಂದರ್ಭ ಕಲ್ಲು, ಮಣ್ಣು ಕುಸಿದು ಬಿದ್ದು ಚರಂಡಿ ಸಂಪೂರ್ಣ ಮುಚ್ಚಲ್ಪಟ್ಟು ಮಳೆ ನೀರು ರಸ್ತೆಯಲ್ಲಿ ಹರಿದಾಡತೊಡಗಿತು. ಅದರ ಪರಿಣಾಮ ಕೋಟಿ ಕೋಟಿ ಅನುದಾನ ಸುರಿದು ಅಗಲೀಕರಣಗೊಂಡ ರಾಜರಸ್ತೆಯ ಬಾಳಿಕೆಯ ಪ್ರಶ್ನೆ ಎದ್ದಿತ್ತು.

ಗುಡ್ಡದ ಮೇಲಿನ ನಿರ್ಮಾಣ ಹಂತದಲ್ಲಿದ್ದ 2022ರ ಡಿಸೆಂಬರ್ ತಿಂಗಳಲ್ಲಿ ಉಳ್ಳಾಲ ನಗರಸಭೆಯಿಂದ ಒಂದು ವರ್ಷದ ಅವಧಿಗೆ ಪರವಾನಗಿ ನೀಡಲಾಗಿದ್ದ ಮಹುಮಹಡಿಯ ವಸತಿ ಸಂಕೀರ್ಣ ಸಾರ್ವಜನಿಕರ ಪಾಲಿಗೆ ಆತಂಕಕಾರಿಯಾಗಿ ಕಾಡಿತ್ತು. ಈಗ ಎಲ್ಲಾ ಆತಂಕಕ್ಕೂ ಮುಕ್ತಿ ಸಿಗುವ ಹಂತ ತಲುಪಿದೆ.

ನಾಲ್ಕು ಮೀಟರ್‌ಗೆ ಮೂರು ಕೋಟಿ!

ಗುಡ್ಡ ಕುಸಿತ ತಡೆಗೆ ಮಳೆ ಹಾನಿಯಡಿ ಮೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅದರಂತೆ ಕಾಮಗಾರಿ ಭರದಿಂದ ನಡೆಯುತ್ತಿದೆ. 14 ಮೀಟರ್ ಉದ್ದ, ನಾಲ್ಕು ಮೀಟರ್ ಎತ್ತರದಲ್ಲಿ ಕಾಂಕ್ರೀಟ್ ನಿರ್ಮಿತ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಈ ಅನುದಾನದಲ್ಲಿ ಪೂರ್ಣ ಕಾಮಗಾರಿ ನಡೆಯದ ಕಾರಣ ಗುಡ್ಡ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡಲು ಮತ್ತಷ್ಟು ಅನುದಾನದ ಅವಶ್ಯಕತೆ ಇದೆ.

ಚೆಂಬುಗುಡ್ಡೆಯಲ್ಲಿ ಗುಡ್ಡ ಕುಸಿಯಲು ಆರಂಭವಾದ ಬಳಿಕ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ನಿರಂತರ ಆತಂಕದಲ್ಲಿದ್ದರು. ಇದೀಗ ಸ್ಥಳೀಯ ಶಾಸಕರ ಮುತುವರ್ಜಿಯಿಂದ ತಡೆಗೋಡೆ ಕಾಮಗಾರಿ ಆರಂಭವಾಗಿದ್ದು, ಸಾರ್ವಜನಿಕರ ಆತಂಕ ದೂರವಾಗಿದೆ.

ಬಾದುಶಾ ಮಾಸ್ಟರ್, ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ

ತೊಕ್ಕೊಟ್ಟು-ಅಸೈಗೋಳಿ ಸಂಪರ್ಕ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಹೊರರಾಜ್ಯ, ವಿದೇಶಗಳಿಂದ ಉನ್ನತ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಇದು ಅತ್ಯಂತ ಪ್ರಮುಖ ಸಂಪರ್ಕ ಕೊಂಡಿ. ಇಲ್ಲಿನ ಗುಡ್ಡ ಕುಸಿತದ ಆಪತ್ತು ನಿವಾರಿಸಲು 3 ಕೋಟಿ ಅನುದಾನ ಒದಗಿಸಿ ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಯು.ಟಿಖಾದರ್ ಅವರಿಗೆ ಅಭಿನಂದನೆಗಳು.

ದಿನೇಶ್ ರೈ, ಮಾಜಿ ಸದಸ್ಯರು, ಉಳ್ಳಾಲ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net