

ಕಾಸರಗೋಡು: ಗುರುವಾರ ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿ ಊಟ ಮಾಡಿ ಮಲಗಿದ್ದ ಬ್ಯಾಂಕ್ ಮೌಲ್ಯವಾಪಕ ಬಿ.ಎಂ.ಗಿರೀಶ್ ಕುಮಾರ್ (48) ಅವರ ಮೃತದೇಹ ಅಡ್ಕತ್ತಬೈಲಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು ಕೂಡ್ಲು ಪೆರ್ನಡ್ಕ ನಿವಾಸಿ ಹರೀಶ್ ಆಚಾರ್ಯ-ಪುಷ್ಪಲತಾ ದಂಪತಿಯ ಪುತ್ರರಾಗಿರುವ ಇವರು, ಕೆನರಾ ಬ್ಯಾಂಕ್‌ನ ಬೇಕಲ, ಪಳ್ಳಿಕರೆ ಶಾಖೆಯ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ಮಲಗಿದ್ದವರು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಕಾಣುತ್ತಿರಲಿಲ್ಲ. ಹುಡುಕಾಟದ ವೇಳೆ ಮೃತದೇಹ ಕಾಸರಗೋಡಿನ ಅಡ್ಕತ್ತಬೈಲಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಚೆಮೇನಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಐವರು ವಿದ್ಯಾರ್ಥಿಗಳು ವಿದ್ಯಾರ್ಥಿಯೊಬ್ಬನ ತಲೆಯನ್ನು ಬಲವಂತವಾಗಿ ಕಿಟಕಿಯ ಸರಳಿಗೆ ಬಡಿದು ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ವಿದ್ಯಾರ್ಥಿಗಳ ವಿರುದ್ದ ಚೀಮೇನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೈದ ವಿದ್ಯಾರ್ಥಿಗಳನ್ನು ಶಾಲೆಯಿಂದ ಅವಾನತುಗೊಳಿಸಲಾಗಿದೆ. ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಬುಧವಾರ ತರಗತಿ ಕೊಠಡಿಗೆ ತೆರಳುತ್ತಿದ್ದ ವೇಳೆ ಪ್ಲಸ್‌ಟು ತರಗತಿಯ ಐವರು ವಿದ್ಯಾರ್ಥಿಗಳು ಆತನ ಮೇಲೆ ಹಲ್ಲೆ ನಡೆಸಿ, ಕಿಟಿಕಿಯ ಸರಳಿಗೆ ಆತನ ತಲೆಯನ್ನು ಹಿಡಿದು ಬಲವಾಗಿ ಜಜ್ಜಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿಯ ತಲೆಯಿಂದ ರಕ್ತ ಸುರಿದಿದೆ. ಇತರ ವಿದ್ಯಾರ್ಥಿಗಳು ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು: ಕಾಡುಹಂದಿ ರಸ್ತೆಗೆ ಅಡ್ಡವಾಗಿ ಓಡಿದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಮಗುಚಿಬಿದ್ದು, ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಆಟೋ ಚಾಲಕ, ಮೊಗ್ರಾಲ್ ಕಡವತ್‌ನ ಬಿ.ಎ.ಅಬ್ದುಲ್ ಕರೀಂ (39) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಟ್ಟತಡ್ಕ ಏಕಜಿ ನಗರದಲ್ಲಿ ಸೆ.30ರಂದು ಅಪಘಾತ ಸಂಭವಿಸಿತ್ತು. ಅಬ್ದುಲ್ ಕರೀಂ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಕಾಡುಹಂದಿಯೊಂದು ರಸ್ತೆಗೆ ಅಡ್ಡವಾಗಿ ಓಡಿದ್ದು, ಹಂದಿಗೆ ಡಿಕ್ಕಿ ಹೊಡೆದ ಬೈಕ್ ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಅಬ್ದುಲ್ ಕರೀಂ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾಸರಗೋಡು: ಜಾಾರ್ಖಂಡ್‌ನಿಂದ ನಾಪತ್ತೆಯಾಗಿದ್ದ 19ರ ಹರೆಯದ ಯುವತಿಯನ್ನು ಉಪ್ಪಳದಲ್ಲಿ ಪತ್ತೆ ಹಚ್ಚಲಾಗಿದೆ. ಒಂದು ವಾರದ ಹಿಂದೆ ಯುವತಿ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಯುವತಿ ಉಪ್ಪಳದಲ್ಲಿರುವ ವಾಹಿತಿ ಲಭಿಸಿತ್ತು. ಉಪ್ಪಳದ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾಾರ್ಖಂಡ್ ಮೂಲದ ಯುವಕನ ಜತೆ ಯುವತಿ ಇರುವುದು ಪತ್ತೆಯಾಗಿದೆ. ಬಳಿಕ ಯುವಕ ಹಾಗೂ ಯುವತಿಯನ್ನು ಪೊಲೀಸರು ಜಾರ್ಖಂಡ್‌ಗೆ ಕರೆದೊಯ್ದರು.