

ವಿಜಯವಾಣಿ ಸುದ್ದಿಜಾಲ ಗುರುಪುರ
ಐದಾರು ವರ್ಷಗಳ ಹಿಂದೆ ನೋಡಿದ್ದ ಬಜ್ಪೆ ಜಂಕ್ಷನ್ ಇಂದು ಅತ್ಯಾಧುನಿಕವಾಗಿ ಕಂಗೊಳಿಸುತ್ತಿದೆ. ಬಸ್-ಪ್ರಯಾಣಿಕರ ತಂಗುದಾಣ, ಸುಸಜ್ಜಿತ ಪಾಕಿರ್ಂಗ್ ವ್ಯವಸ್ಥೆ, ಒಳಚರಂಡಿ, ನೂತನ ಮಾರುಕಟ್ಟೆ ಹಾಗೂ ರಸ್ತೆ ಕಾಂಕ್ರೀಟೀಕರಣದ ಮೂಲಕ ಪಟ್ಟಣ ಮೇಲ್ದರ್ಜೆಗೇರಿದೆ. ಆದರೆ, ಜಂಕ್ಷನ್ಗೆ ಅನತಿ ದೂರದಲ್ಲೇ ಇರುವ ಬಜ್ಪೆ ಚರ್ಚ್ ಎದುರಿನ ರಾಜ್ಯ ಹೆದ್ದಾರಿಯ ಕಿರು ಅಂತರವೊಂದು ಸಂಪೂರ್ಣ ಹಾಳಾಗಿದ್ದು, ಸುಂದರ ಪಟ್ಟಣಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಆಳವಾದ ಹೊಂಡ-ಗುಂಡಿಗಳಿಂದಾಗಿ ಇದು ಅಪಾಯಕಾರಿ ಅಪಘಾತ ವಲಯವಾಗಿ ಬದಲಾಗಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚರ್ಚ್ ಎದುರಿನ ಸಣ್ಣ ಸರ್ಕಲ್ ದಾಟಿ ಜಂಕ್ಷನ್ ಪ್ರವೇಶಿಸುವಾಗ ವಾಹನ ಸವಾರರಿಗೆ ನರಕದರ್ಶನವಾಗುತ್ತದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಅವುಗಳ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಪಲ್ಟಿಯಾಗಿ ಗಾಯಗೊಳ್ಳುವುದು ಇಲ್ಲಿ ನಿತ್ಯದ ಗೋಳು. ವಿಶೇಷವೆಂದರೆ, ಈ ಹೊಂಡದ ಎರಡೂ ಬದಿಗಳಲ್ಲಿ ಕಾಂಕ್ರೀಟ್ ರಸ್ತೆಯಿದೆ. ವಾಹನ ಸವಾರರಿಗೆ ತೊಂದರೆ ನೀಡಲೆಂದೇ ಈ ಜಾಗದಲ್ಲಿ ಹಂಪ್ಸ್ ರೂಪದಲ್ಲಿ ಹೊಂಡವನ್ನು ಮುಚ್ಚದೆ ಬಿಟ್ಟಿರಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಜ್ಪೆಯಿಂದ ಗುರುಪುರ ಕೈಕಂಬ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಳೆದ ಒಂದು ವರ್ಷದಿಂದ ಡಾಂಬರು ಕಾಣದೆ ತೀರಾ ದುಸ್ಥಿತಿಯಲ್ಲಿದೆ. ಬಜ್ಪೆ ಸರ್ಕಲ್, ಹಳೇ ಪೊಲೀಸ್ ಠಾಣೆ ಮುಂಭಾಗ ಹಾಗೂ ಕಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಕಿತ್ತುಹೋಗಿ ತೋಡಿನಂತಾಗಿದೆ. ಮಳೆ ನೀರು ಹರಿದು ಡಾಂಬರು ಕೊಚ್ಚಿಹೋಗಿದ್ದು, ಎಲ್ಲೆಡೆ ಹರಡಿಕೊಂಡಿರುವ ಜಲ್ಲಿಕಲ್ಲುಗಳು ವಾಹನ ಸಂಚಾರಕ್ಕೆ ಕಂಟಕವಾಗಿವೆ. ಸಾರ್ವಜನಿಕರು ಪದೇಪದೆ ಆಗ್ರಹಿಸಿದ್ದರೂ ಪಿಡಬ್ಲ್ಯೂಡಿ ಇಲಾಖೆ ಕನಿಷ್ಠ ತೇಪೆ ಹಚ್ಚುವ ಕೆಲಸಕ್ಕೂ ಮುಂದಾಗಿರಲಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.