ಆಯುಷ್ ಹಬ್ಬ 2026 ಪೋಸ್ಟರ್ ಬಿಡುಗಡೆ

ಆಯುಷ್ ಹಬ್ಬದ ಪೋಸ್ಟರ್‌ನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಶನಿವಾರ ಸರ್ಕೀಟ್ ಹೌಸ್‌ನಲ್ಲಿ ಬಿಡುಗಡೆಗೊಳಿಸಿದರು.
ಆಯುಷ್ ಹಬ್ಬದ ಪೋಸ್ಟರ್‌ನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಶನಿವಾರ ಸರ್ಕೀಟ್ ಹೌಸ್‌ನಲ್ಲಿ ಬಿಡುಗಡೆಗೊಳಿಸಿದರು.
Published on
ಮಂಗಳೂರು: ಆಯುಷ್ ಇಲಾಖೆ, ದ.ಕ. ಜಿಲ್ಲಾಡಳಿತ, ಆಯುಷ್ ಹಬ್ಬ ಸಮಿತಿ ಸಹಕಾರದೊಂದಿಗೆ ಎಲ್ಲಾ ಆಯುಷ್ ಆಸ್ಪತ್ರೆಗಳು, ಕಾಲೇಜುಗಳು ಹಾಗೂ ವೃತ್ತಿನಿರತ ಆಯುಷ್ ವೈದ್ಯರುಗಳ ಜಂಟಿ ಆಶ್ರಯದಲ್ಲಿ ಜ.31 ಮತ್ತು ಫೆ. 1 ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನಲ್ ಸೆಂಟರ್‌ನಲ್ಲಿ ಹಮ್ಮಿಕೊಂಡಿರುವ ಆಯುಷ್ ಹಬ್ಬದ ಪೋಸ್ಟರ್‌ನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಶನಿವಾರ ಸರ್ಕೀಟ್ ಹೌಸ್‌ನಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ದಶಕದ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭ ಆಯುಷ್ ಹಬ್ಬ ಆಯೋಜಿಸಲಾಗಿತ್ತು. ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ದಿ ಪದ್ದತಿಗಳು ಭಾರತದ ಖುಷಿ ಮುನಿಗಳು ವಿಶ್ವಕ್ಕೆ ನೀಡಿದ ಕೊಡುಗೆ. ಆಯುಷ್ ಪದ್ದತಿಯ ಬಗ್ಗೆ ಜನರಿಗೆ ಇನ್ನಷ್ಟು ಅರಿವು ಮೂಡಿಸಲು ಆಯುಷ್ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಆಯುಷ್ ಹಬ್ಬ ಸಮಿತಿ ಗೌರವಾಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾತನಾಡಿ, ಆಯುಷ್ ಚಿಕಿತ್ಸಾ ಪದ್ದತಿಗಳ ಅರಿವು ಮೂಡಿಸಿ ಪ್ರತಿ ಮನೆಗೂ ಆಯುಷ್ ಪದ್ದತಿಗಳ ಪ್ರಯೋಜನವನ್ನು ತಲುಪಿಸುವುದು ಈ ಹಬ್ಬದ ವಿಶೇಷತೆ. ಎರಡು ದಿನಗಳ ಉತ್ಸವದಲ್ಲಿ ಸುಮಾರು 5,000 ವೈದ್ಯರು, 10,000 ಆಯುಷ್ ವೈದ್ಯ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, 20,000ಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ. 50 ಸ್ಟಾಲ್ ಗಳ ಮೂಲಕ ಸಮಗ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಹಬ್ಬದ ವಿಶೇಷತೆ ಏನು?
ಎರಡು ದಿನಗಳ ಆಯುಷ್ ಹಬ್ಬದಲ್ಲಿ ಉಚಿತ ಸ್ವಾಸ್ಥ್ಯ ಶಿಬಿರ (ಜಿಲ್ಲೆಯ ಖ್ಯಾತ ಆಯುಷ್ ವೈದ್ಯರಿಂದ ಉಚಿತ ಸೇವೆ), ಉಚಿತ ನಾಡೀ ಪರೀಕ್ಷೆ (ಮುಂಚಿತವಾಗಿ ನೋಂದಣಿ ಮಾಡಿದವರಿಗೆ), ನಾಡೀ ತರಂಗಿಣಿ ಯಂತ್ರದ ಮೂಲಕ ತಪಾಸಣೆ ನಡೆಯಲಿದೆ. ಹಿರಿಯ ನಾಗರಿಕರಿಗೆ ಆಯುಷ್ ಆರೈಕೆ, ಜೀವನಶೈಲಿ ನಿರ್ವಹಣಾ ಶಿಬಿರ, ಆರೋಗ್ಯ ಹಬ್ಬ, ಮಹಿಳಾ ಸ್ವಾಸ್ಥ್ಯ ಹಬ್ಬ, ಆಯಷ್ ಸೌಂದರ್ಯ ಹಬ್ಬ, ಹೃದಯ ಆರೋಗ್ಯ ಸಂಭ್ರಮ, ಒತ್ತಡ ನಿವಾರಣಾ ಕೌಶಲ್ಯ, ಆಯುಷ್ ವೈಜ್ಞಾನಿಕ ಅಧಿವೇಶನ, ಸ್ಪದೇಶಿ ಸಾವಯವ ಹಬ್ಬ, ಆಯುಷ್ ಚಿಕಿತ್ಸಾ ದರ್ಶನ, ಸ್ವಾಸ್ಥ್ಯ ಪ್ರದರ್ಶನ ಮಳಿಗೆಗಳು, ಆಯುಷ್ ಔಷಧ ಮಳಿಗೆಗಳು ಇರಲಿದೆ ಎಂದು ವಿವರಿಸಿದರು.
ಆಯುಷ್ ಹ್ಯಾಕಥಾನ್, ಆಯುಷ್ ಸ್ಟಾರ್ಟ್ ಅಪ್, ಸಾಂಸ್ಕೃತಿಕ ವೈಭವ, ಮನರಂಜನಾ ವೈಭವ, ಉದ್ದಿಮೆದಾರರ ಸಭೆ, ಮಧುಮೇಹ ಆಹಾರ ಹಬ್ಬ, ಜೆನ್ ಝಡ್‌ನವರಿಗೆ ಆಯುಷ್ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಯುಷ್ ಹಬ್ಬಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೂರ್ವಸಿದ್ದತಾ ಸಭೆಗಳು ನಡೆದಿದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಆಯುಷ್ ಜೀವನ ಪದ್ದತಿಗಳ ಪರಿಪೂರ್ಣ ಮಾಹಿತಿ ಮತ್ತು ಆಧುನಿಕ ತಂತ್ರಜ್ಞಾನ ಆವಿಷ್ಕಾರಗಳು, ಜನರು ಆಯ್ಕೆ ಮಾಡಬಹುದಾದ ಹಲವಾರು ಪ್ರಮುಖ ಅಂಶಗಳನ್ನು ಹೊಂದಿರುವ ವೈಶಿಷ್ಟ್ಯಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಕೇಶವ ಪಿ.ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಸಂಘಟನ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಸಮಿತಿ ಕಾರ್ಯದರ್ಶಿ ಡಾ.ಕೃಷ್ಣ ಗೋಖಲೆ, ಖಜಾಂಚಿ ಡಾ.ಗೋಪಾಲಕೃಷ್ಣ ನಾಯಕ್, ಪ್ರಮುಖರಾದ ಡಾ.ಎನ್.ಟಿ. ಅಂಚನ್, ಡಾ.ನಂದೀಶ್,ಡಾ.ಪ್ರವೀಣ್ ರೈ, ಡಾ.ಪ್ರದೀಪ್,ಡಾ.ದೇವದಾಸ್ ಪುತ್ರನ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net