ಇಂಡಿಯಾ ಮಾಸ್ಟರ್ ಶೆಫ್’ ಸವಿ ಬಡಿಸಿದ ಮಂಗಳೂರಿನ ಅವನಿ-ವೇಣು ಶರ್ಮ

ಅವನಿ-ವೇಣು ಶರ್ಮ
ಅವನಿ-ವೇಣು ಶರ್ಮ
Published on
ಮಂಗಳೂರು: ಸೋನಿ ಎಂಟರ್ಟೇನ್ಮೆಂಟ್ ವಾಹಿನಿ ಹಾಗೂ ಸೋನಿ ಎಲ್ಐವಿ ಒಟಿಟಿಯಲ್ಲಿ ಪ್ರಸಾರವಾದ 45 ಸಂಚಿಕೆಗಳ ‘ಇಂಡಿಯಾ ಮಾಸ್ಟರ್ ಶೆಫ್ ಜೋಡಿ ಕಾರ್ಯಕ್ರಮ’ದಲ್ಲಿ ಕರ್ನಾಟಕ-ಕೇರಳ ಪ್ರತಿನಿಧಿಸಿದ ಉಪ್ಪಂಗಳ ವೇಣು ಶರ್ಮ ಹಾಗೂ ಅವರ ಪುತ್ರಿ ಅವನಿ ಶರ್ಮ ಕುದ್ಕುಳಿ ಅವರು ಕರಾಡ ಬ್ರಾಹ್ಮಣ ಅಡುಗೆ ಐಟಂಗಳಿಂದ ಜಗದಗಲ ಸುದ್ದಿ ಮಾಡಿದ್ದಾರೆ.
ಕೇರಳದ ಕಾಸರಗೋಡಿನ ಒಂದು ಪುಟ್ಟ ಹಳ್ಳಿ ಉಪ್ಪಂಗಳದಿಂದ ಬಂದ 26ರ ಹರೆಯದ ಯುವತಿ ಅವನಿ ಶರ್ಮಾಗೆ ಈ ಶೋಗೆ ಸಾಥ್ ನೀಡಿದದ್ದು ಅವಳ ತಂದೆ ವೇಣು ಶರ್ಮಾ. ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಯಶಸ್ವಿಯಾಗಿದ್ದ ಅಪ್ಪ, ಮಗಳ ಅಡುಗೆಯ ಆಸಕ್ತಿಗೆ ಕೈಜೋಡಿಸಿ ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿ 40 ಸಂಚಿಕೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಶೋ ಅಂತಿಮ ಸಂಚಿಕೆ ಮಾ.6 ಶುಕ್ರವಾರ ಪ್ರಸಾರವಾಗಲಿದೆ.
ಸೀಸನ್‌ನ ಮೊದಲ ‘ಇಮ್ಯುನಿಟಿ ಪಿನ್’ ಗೆದ್ದ ಬಳಿಕ, ಪ್ರಬಲ ಸ್ಪರ್ಧಿಗಳ ನಡುವೆ, ಅಪ್ಪ-ಮಗಳು ತಯಾರಿಸಿದ ‘ದೀಪ ಆರಾಧನೆ’ ಎಂಬ ಸಿಹಿ ತಿಂಡಿ ತೀರ್ಪುಗಾರರಾದ ರಣವೀರ್ ಬ್ರಾರ್ ಮತ್ತು ವಿಕಾಸ್ ಖನ್ನಾ ಅವರ ಮನ ಗೆದ್ದಿತು. ಬಳಿಕ ವಿವಿಧ ಐಟಂಗಳ ಮೂಲಕ ಟಿ.ವಿ. ಹಾಗೂ ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಸುದ್ದಿ ಮಾಡಿತು.
ಫೆ.27ರ ಸೆಮಿ-ಫೈನಲ್ ಸುತ್ತಿನಲ್ಲಿ 40ನೇ ಕಂತಿನಲಲ್ಲಿ, ಪ್ಲೇಟಿಂಗ್ ಮುಗಿಸಲು ಕೇವಲ ಎರಡು ನಿಮಿಷಗಳ ಕಾಲಾವಕಾಶ ಕಡಿಮೆಯಾಗಿ ಇವರು ಶೋದಿಂದ ಹೊರ ಬೀಳಬೇಕಾಯಿತು. ಈ ಹೊತ್ತಿಗೆ ಈ ಸ್ಪರ್ಧಿಗಳು ಏಪ್ರನ್ ಕಳಚಿ ಹೊರಬರುವಾಗ ತೀರ್ಪುಗಾರರು ಕೂಡ ಕಣ್ಣೀರಿಟ್ಟರು.
ಗ್ರಾಮೀಣ ಸೊಗಡಿನ ಅಡುಗೆಗೆ ಒತ್ತು ನೀಡಿದ ಈ ಅಪ್ಪ ಮಗಳು, ಶಾಖಾಹಾರಿ ಆಡುಗೆ ಮಾಡಿದ ಹಾಗೂ ಕರ್ನಾಟಕ ಮತ್ತು ಕೇರಳವನ್ನು ಪ್ರತಿನಿಧಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net