ಆ. 7-9: ಯೂರಾಲಜಿಸ್ಟ್‌ ಸಮ್ಮೇಳನ "ಸುಜಿಕಾನ್"

.
.
Published on

ಪ್ರಮುಖ ಮುಖ್ಯಾಂಶಗಳು

  • ದೇಶದ ವಿವಿಧ ಭಾಗಗಳಿಂದ 1,500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ
ಮಂಗಳೂರು: ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಂಗಳೂರು ಯೂರಾಲಜಿ (ಮೂತ್ರಶಾಸ್ತ್ರ) ಫೋರಂನ ವತಿಯಿಂದ ಅಸೋಸಿಯೇಷನ್ ಆಫ್ ಸದರ್ನ್ ಯೂರಾಲಜಿಸ್ಟ್‌ಗಳ 37ನೇ ವಾರ್ಷಿಕ ಸಮ್ಮೇಳನ "ಸುಜಿಕಾನ್- 2026" ಆ. 7ರಿಂದ 9ರ ವರೆಗೆ ಮೇರಿಹಿಲ್‌ನ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ಕೆ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ. 7ರಂದು ಸಂಜೆ 5 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಯಾಗಿರಲಿದ್ದು, ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಹಿರಿಯ ಯೂರಾಲಜಿಸ್ಟ್‌ಗಳು, ಯೂರಾಲಜಿ ವಿಭಾಗದ ಸ್ನಾತಕೋತ್ತರ ತರಬೇತಿದಾರರು, ಪರಿಣತಿ ಪಡೆದ ವೈದ್ಯಕೀಯ ತಜ್ಞರು ಹಾಗೂ ಯೂರಾಲಜಿಕಲ್ ಶಸ್ತ್ರಚಿಕಿತ್ಸಾ ಉಪಕರಣಗಳ ಪ್ರಮುಖ ತಯಾರಕರು ಮತ್ತು ಪೂರೈಕೆದಾರರನ್ನು ಈ ಸಮ್ಮೇಳನ ಜೊತೆಗೂಡಿಸಲಿದೆ. ಮೂರು ದಿನಗಳ ಈ ವೈಜ್ಞಾನಿಕ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 1,500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಯೂರಾಲಜಿ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನ ವಿನಿಮಯ, ಸಂಶೋಧನೆ ಮತ್ತು ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಇದೊಂದು ವೇದಿಕೆಯಾಗಲಿದೆ ಎಂದರು.
ಸಂಘಟನಾ ಕಾರ್ಯದರ್ಶಿ ಡಾ. ಬಿ.ಎಂ. ಜೀಶಾನ್ ಹಮೀದ್, ಕೋಶಾಧಿಕಾರಿ ಡಾ. ಪ್ರೀತಂ ಶರ್ಮಾ, ಅಸೋಸಿಯೇಷನ್ ಆಫ್ ಸದರ್ನ್ ಯೂರಾಲಜಿಸ್ಟ್ ಕೋಶಾಧಿಕಾರಿ ಡಾ. ನಿಶ್ಚಿತ್ ಡಿ'ಸೋಜಾ, ಮಂಗಳೂರು ಯೂರಾಲಜಿ ಫಾರಂ ಅಧ್ಯಕ್ಷ ಡಾ. ಸನ್ಮಾನ್ ಕೆ.ಎನ್., ಕಾರ್ಯದರ್ಶಿ ಡಾ. ಸುಯೋಗ್ ಶೆಟ್ಟಿ, ಕೋಶಾಧಿಕಾರಿ ಡಾ. ರೋಶನ್ ವಿ. ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net