

ಬಂಟ್ವಾಳ: ಹಣಕಾಸಿನ ವಿಚಾರವಾಗಿ ವಾತಿನ ಚಕಮಕಿ ನಡೆದು ಬಿ.ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್ನಲ್ಲಿ ಅ.17ರ ರಾತ್ರಿ ಉದಯ್ ಎಂಬುವರಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಲಾಗಿದೆ. ಹಲವು ವರ್ಷಗಳಿಂದ ನೀಡಿದ್ದ ಹಣವನ್ನು ವಾಪಸ್ ಕೇಳಿದ ವಿಚಾರವಾಗಿ ಅಜಿತ್ ಕಲ್ಲಗುಡ್ಡೆ ಎಂಬಾತ ಉದಯ್ ಅವರ ಹೊಟ್ಟೆಯ ಬಲಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ತಡೆಯಲು ಹೋದಾಗ ಅವರ ಎಡಗೈ ಮಣಿಕಟ್ಟಿಗೂ ಗಾಯವಾಗಿದೆ. ಸ್ಥಳಕ್ಕೆ ಬಂದ ಉದಯ್ ಅವರ ಅಣ್ಣ ಲೋಕೇಶ್ ಅವರ ಮೇಲೂ ಆರೋಪಿ ಚೂರಿ ಹಿಡಿದು ಅಟ್ಟಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕೇಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ: ಸರಪಾಡಿ ಗ್ರಾಮದ ಕಟ್ಟೆರಸ್ತೆ ಬಳಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಸ್ತೆಯಲ್ಲಿ ಸಂಚರಿಸುವವರಿಗೆ ನಾಲ್ಕು ಬಾರಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಸರಪಾಡಿ ವಾವಿನಕಟ್ಟೆ ರಸ್ತೆಯ ಕಟ್ಟೆರಸ್ತೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗೇರು ನೆಡುತೋಪಿನಿಂದ ರಸ್ತೆ ದಾಟಿ ಮತ್ತೊಂದು ಬದಿಗೆ ಚಿರತೆ ಸಂಚರಿಸುತ್ತಿರುವುದು ಕಂಡುಬಂದಿದೆ. ನಿರ್ಜನ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಚಿರತೆಯಿಂದ ತೊಂದರೆಯಾಗುವ ಆತಂಕ ಎದುರಾಗಿದೆ. ಹೀಗಾಗಿ ಅರಣ್ಯ ಇಲಾಖೆ ಬೋನು ಇರಿಸಿ ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.