

ಉಪ್ಪಿನಂಗಡಿ: ಹಳೇ ಬಟ್ಟೆ ಸಂಗ್ರಹಿಸುವ ನೆಪದಲ್ಲಿ ಮನೆಗೆ ಬಂದ ಯುವಕರ ತಂಡವೊಂದು, ಮಕ್ಕಳಿಲ್ಲದ ದಂಪತಿಗೆ ಆಶ್ರಮದಿಂದ ಮಗು ಕೊಡಿಸುವುದಾಗಿ ನಂಬಿಸಿ ದಾಖಲೆಗಳಿಗೆ ಸಹಿ ಪಡೆದು ಹಣ ವಸೂಲಿ ಮಾಡಲು ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಕೃಷಿಕ ದಂಪತಿಯ ಮನೆಗೆ ಬಂದ ತಂಡ, ಮಕ್ಕಳಿಲ್ಲವೆಂದು ತಿಳಿದ ಬಳಿಕ ಆಶ್ರಮದಿಂದ ಮಗು ಕೊಡಿಸುವುದಾಗಿ ಭರವಸೆ ನೀಡಿದೆ. ಬಳಿಕ ಆಧಾರ್, ಪಾನ್ ಕಾರ್ಡ್ ಪ್ರತಿಗಳನ್ನು ಪಡೆದು ಕೆಲವು ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದೆ.
ನಂತರ ಕರೆ ಮಾಡಿದ ತಂಡ, ಅರ್ಜಿ ನೋಂದಣಿಗೆ 5 ಸಾವಿರ ಹಾಗೂ ದತ್ತು ಪ್ರಕ್ರಿಯೆಗೆ ಸುಮಾರು 2 ಲಕ್ಷ ಪಾವತಿಸಬೇಕೆಂದು ತಿಳಿಸಿದೆ. ಇದರಿಂದ ಅನುಮಾನಗೊಂಡ ದಂಪತಿ ನೆರೆಮನೆಯ ಭಟ್ಟರ ಬಳಿ ವಿಫಿಯ ತಿಳಿಸಿದಾಗ, ಇದು ವಂಚನೆಯ ಜಾಲವೆಂದು ಎಚ್ಚರಿಸಿದ್ದಾರೆ.
ಅವರ ಸಲಹೆಯಂತೆ ಮುಂಗಡ ಹಣ ಪಡೆಯಲು ಬಂದ ತಂಡದ ಸದಸ್ಯನನ್ನು ಸ್ಥಳೀಯರ ಸಹಕಾರದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ದಂಪತಿಯಿಂದ ಪಡೆದ ದಾಖಲೆಗಳನ್ನು ಹಿಂತಿರುಗಿಸುವಂತೆ ಪೊಲೀಸರು ಸೂಚಿಸಿದ್ದು, ತಂಡದ ಇತರ ವಂಚನೆಗಳ ಬಗ್ಗೆಯೂ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಮನೆಗಳಿಗೆ ವಿವಿಧ ನೆಪಗಳಲ್ಲಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುವ ಪ್ರಕರಣಗಳ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.