

ಉಳ್ಳಾಲ: ಬೋಳಿಯಾರ್ ಸಮೀಪ ಪಿಕಪ್ ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದ ಸಂದರ್ಭ ಮೃತರ ಸ್ನೇಹಿತರು ಹಲ್ಲೆಗೆ ಯತ್ನಿಸಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಅ್ರಾಝ್, ಜುನೈದ್, ಮಹಮ್ಮದ್ ಹಫೀಜ್ ನಡುವೆ ಮನಸ್ತಾಪ ಇತ್ತು. ಈ ವಿಚಾರವಾಗಿ ಅ.19ರಂದು ಬೋಳಿಯಾರ್ ಸಮೀಪದ ಮಜಿ ಕ್ರಾಸ್ನಲ್ಲಿ ಹೊಡೆದಾಟ ನಡೆದಿದೆ. ಇದರಿಂದ ಕೋಪಗೊಂಡಿದ್ದ ಹಫೀಝ್, ಅ್ರಾಝ್ ಮತ್ತು ಜುನೈದ್ ಸಂಚರಿಸುತ್ತಿದ್ದ ಸ್ಕೂಟರ್ ಬೆನ್ನಟ್ಟಿ ಪಡೀಲ್ ಪೆಟ್ರೋಲ್ ಪಂಪ್ ಬಳಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರೂ ಸಾವನ್ನಪ್ಪಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಆರೋಪಿ ಹಫೀಝ್ನನ್ನು ಬಂಧಿಸಿದ ಪೊಲೀಸರು, ಮಹಜರು ನಡೆಸುವ ನಿಟ್ಟಿನಲ್ಲಿ ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಪೊಲೀಸರ ಎದುರಲ್ಲೇ ಮೃತರ ಸ್ನೇಹಿತರಾದ ಅಬ್ದುಲ್ ರಹಿಮಾನ್ ಮತ್ತು ಜಾಹೀರ್ ಎಂಬುವರು ಏಕಾಏಕಿಯಾಗಿ ಆರೋಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು ಸ್ಥಳದಲ್ಲಿದ್ದವರು ತಡೆದಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.