

ಬಂಟ್ವಾಳ: ತೀರಾ ಬಡತನದಲ್ಲಿ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರಿಗೆ 9 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿದ್ದು, ಒಂದಷ್ಟು ದಾನಿಗಳು ನೆರವು ನೀಡಿದ್ದಾರೆ. ಕಷ್ಟದಲ್ಲಿರುವವರಿಗೆ ನೆರವು ನೀಡಿದಾಗ ಅದಕ್ಕೆ ದೇವರ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದು ಮನೆ ನಿರ್ಮಾಣದ ರೂವಾರಿ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಹೇಳಿದರು.
ಸರಪಾಡಿಯ ಮಾವಿನಕಟೆಯಲ್ಲಿರುವ ಬಡ ಮಹಿಳೆ ಭವಾನಿ ಶೆಟ್ಟಿಯವರಿಗೆ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಬಿ.ಸಿ.ರೋಡು ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಮನೆ ಹಸ್ತಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬೈ ಉದ್ಯಮಿ ರಘು ಎಲ್.ಶೆಟ್ಟಿ, ಬಿ.ಸಿ.ರೋಡಿನ ಹಿರಿಯ ವಕೀಲ ಅಶ್ವನಿ ಕುಮಾರ್ ರೈ, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ, ಡಾ.ಗೀತಾ ಪ್ರಕಾಶ್, ಉದ್ಯಮಿ ರಿಯಾಜ್ ರೆಕ್ಸಿಡಿ, ಸರಪಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ಮೋಹನದಾಸ ಶೆಟ್ಟಿ, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಳ ಧರ್ಮದರ್ಶಿ ದೇಜಪ್ಪ ಬಾಚಕೆರೆ, ಪ್ರಮುಖರಾದ ಗೋವರ್ಧನ್ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾವನೆಗೈದರು. ಪ್ರಕಾಶ್ಚಂದ್ರ ಆಳ್ವ ವಂದಿಸಿ, ರಾಧಾಕೃಷ್ಣ ರೈ ನಿರ್ವಹಿಸಿದರು.