ಸುಟ್ಟ ಗಾಯಕ್ಕೊಳಗಾಗಿದ್ದ ಎಎಸ್‌ಐ ಹರೀಶ್ಚಂದ್ರ ಮೃತ್ಯು

ಎಎಸ್‌ಐ ಹರಿಶ್ಚಂದ್ರ
ಎಎಸ್‌ಐ ಹರಿಶ್ಚಂದ್ರ
Published on
ಮಂಗಳೂರು: ತೀವ್ರ ತರದ ಬೆಂಕಿಯ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ (57) ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಡಿ.28ರಂದು ಮಂಗಳೂರಿನ ಕೆಪಿಟಿ ಬಳಿಯ ವ್ಯಾಸನಗರದ ಮನೆಯಲ್ಲಿ ತರಗೆಲೆಯನ್ನು ಸುಡುವ ವೇಳೆ ಬೆಂಕಿಯ ತೀವ್ರ ತರದ ಸುಟ್ಟ ಗಾಯಕ್ಕೆ ಒಳಗಾಗಿದ್ದರು. ಕಳೆದ ಸುಮಾರು ಎರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಕಾವುಗೋಳಿಯವರಾದ ಹರೀಶ್ಚಂದ್ರ ಅವರು ಈ ಮೊದಲು ಬೈಕಂಪಾಡಿಯಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ವ್ಯಾಸ ನಗರದಲ್ಲಿ ಮನೆ ಮಾಡಿ ವಾಸವಾಗಿದ್ದರು. 1993ರ ನವೆಂಬರ್ ನಲ್ಲಿ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು ಸುಮಾರು 33 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪಾಂಡೇಶ್ವರ ಠಾಣೆ, ಡಿವೈಎಸ್ ಪಿ ಕಚೇರಿ, ಎಸಿಪಿ ಕಚೇರಿ, ಕರಾವಳಿ ಕಾವಲು ಪಡೆ, ಸಂಚಾರ ಪೂರ್ವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಮತ್ತೆ ಪಾಂಡೇಶ್ವರ ಠಾಣೆಗೆ ವರ್ಗಾವಣೆ ಗೊಂಡಿದ್ದರು. ಹತ್ತು ವರ್ಷದ ಹಿಂದೆ ಎಎಸ್‌ಐ ಆಗಿ ಭಡ್ತಿ ಪಡೆದಿದ್ದರು. ಪಾಂಡೇಶ್ವರದ ಪೊಲೀಸ್ ಲೇನ್ ನ ಮುನೀಶ್ವರ ಮಹಾಗಣಪತಿ ದೇವಸ್ಥಾನದ ಉಪಾಧ್ಯಕ್ಷರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net