

ಪ್ರಮುಖ ಮುಖ್ಯಾಂಶಗಳು
ಪುತ್ತೂರು: ಪುತ್ತಿಲಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ನಾಯಕರಿಗೆ ಸವಾಲು ಹಾಕಿರುವುದು ಪುತ್ತೂರು ಬಿಜೆಪಿಯಲ್ಲಿನ್ನೂ ಅಸಮಾಧಾನದ ಹೊಗೆ ಆರಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವದ ಸುದ್ದಿಗೋಷ್ಠಿ ಕೇವಲ ಧಾರ್ಮಿಕ ವಿಚಾರಕ್ಕಷ್ಟೇ ಸೀಮಿತವಾಗದೆ ರಾಜಕೀಯವಾಗಿಯೂ ಸಂದೇಶ ರವಾನಿಸುವ ವೇದಿಕೆಯಾಗಿ ಮಾರ್ಪಟ್ಟಿದೆ.
ಪಕ್ಷದಜವಾಬ್ದಾರಿ ತೆಗೆದುಕೊಳ್ಳುವ ವಿಚಾರದಲ್ಲಿ ರಾಜ್ಯ ನಾಯಕರು ಕೂತು ಮಾತನಾಡಿದ್ದಾರೆ. ಜವಾಬ್ದಾರಿ ಕೊಡಬೇಕೆಂಬ ಸೂಚನೆ ನೀಡಿದ್ದಾರೆ. ಏನು ಕೊಟ್ಟಿದ್ದಾರೆ ಎಂಬುದನ್ನು ಬಿಜೆಪಿ ಜಿಲ್ಲಾಧ್ಯಕ್ಷರಲ್ಲಿ ಪತ್ರಕರ್ತರೇ ಪ್ರಶ್ನೆ ಮಾಡಬೇಕಾಗಿದೆ. ಪುತ್ತೂರು ಬಿಜೆಪಿ ಘಟಕದಲ್ಲಿರುವ ‘ನಗರ’ಮತ್ತು ’ಗ್ರಾಮಾಂತರ’ ಎಂಬವಿಭಾಗಗಳನ್ನು ವಿಲೀನಗೊಳಿಸಿ ಒಂದೇ ಮಾಡಬೇಕು. ಆಗ ಮಾತ್ರ ಜವಾಬ್ದಾರಿತೆಗೆದುಕೊಳ್ಳಲು ಸಿದ್ಧ. ಈ ರೀತಿ ಮಾಡಿದರೆಮುಂದಿನ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ನಮ್ಮ ಕಾರ್ಯಕರ್ತರಿಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಧಿಕಾರಕ್ಕಾಗಿನಾನು ಹಪಹಪಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಪುತ್ತಿಲ, ಅಧಿಕಾರ ಬೇಕಿದ್ದರೆ ನನಗೂ ದೆಹಲಿ ಮಟ್ಟದ ನಾಯಕರ ಸಂಪರ್ಕವಿತ್ತು. ಏನೂ ಬೇಕಾದರೂ ಮಾಡಬಹುದಿತ್ತು. ಆದರೆ ನಾನು ವ್ಯವಸ್ಥೆ ಸರಿಪಡಿಸುವಿಕೆಗಾಗಿ ಹೋರಾಟ ಮಾಡಿದೆನೇ ಹೊರತು ಕುರ್ಚಿಗಾಗಿ ಅಲ್ಲ. ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಚುನಾವಣೆಗೆ ನಿಲ್ಲಬೇಕಾಯಿತು. ಇವತ್ತಿಗೂ ಕಾರ್ಯಕರ್ತರೇ ನನ್ನ ಹೈಕಮಾಂಡ್ ಎಂದರು.
ಮೊನ್ನೆನಡೆದ ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಗೈರಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಪುತ್ತಿಲ, ನನಗೆ ಯಾರೂ ಕರೆ ಮಾಡಿಲ್ಲ, ಆಹ್ವಾನ ಪತ್ರಿಕೆಯನ್ನೂ ಕೊಟ್ಟಿಲ್ಲ. ಕರೆ ಮಾಡಿದರೆ ನಾನು ಸ್ವೀಕರಿಸದೆ ಕೂತುಕೊಳ್ಳುವ ವ್ಯಕ್ತಿಯಲ್ಲ. ಸರ್ವೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಒಂದೇ ವೇದಿಕೆಯಲ್ಲಿ ಕೂತ ಸಂದರ್ಭದಲ್ಲೂ ನನಗೆ ಯಾವುದೇ ಆಮಂತ್ರಣ ಪತ್ರ ಕೊಡಲಿಲ್ಲ. ಅಟಲ್ ಜೀ ಅವರಿಗೆ ಗೌರವಕೊಡಲು ಕಾರ್ಯಕ್ರಮಕ್ಕೇ ಹೋಗಬೇಕಿಲ್ಲ. ಬಡವರಿಗೆ ಸೂರು ಕಲ್ಪಿಸಿ ನಾವು ಅಟಲ್ ಜೀ ಅವರ ಆದರ್ಶಪಾಲಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
೨೦೨೮ರಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಪ್ರಶ್ನಿಸಿದಾಗ, ಕಾರ್ಯಕರ್ತರ ಅಪೇಕ್ಷೆ ಏನಿದೆಯೋ ಅದಕ್ಕೆ ತಾನು ಬದ್ಧ. ಕಾರ್ಯಕರ್ತರು ಅಪೇಕ್ಷೆ ಮಾಡಿದರೆ ಪಕ್ಷದಲ್ಲಿ ಯಾವುದೇ ಬೆಳವಣಿಗೆ ಆಗಲು ಸಾಧ್ಯ ಎನ್ನುವಂಥದ್ದನ್ನು ಅನೇಕ ಸಂದರ್ಭದಲ್ಲಿ ನೋಡಿದ್ದೇವೆ. ಅದಕ್ಕೆ ಜಾಸ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ತಾನು ಕೇಳಿದ ಹುದ್ದೆ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಧಿಸಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ಪಕ್ಷಕ್ಕೆ ಪರೋಕ್ಷವಾಗಿ ರವಾನಿಸಿದ್ದಾರೆ.