

ಮಂಗಳೂರು: ‘ಕಲೆಗೆ ಧರ್ಮದ ಗಡಿಗಳಿಲ್ಲ, ಪ್ರತಿಭೆಗೆ ಜಾತಿಯ ಮಿತಿಗಳಿಲ್ಲ’ ಎಂಬ ಸಂದೇಶ ಕದಳಿ ಕಲಾ ಕೇಂದ್ರದ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಳದ ರಾಜಾಂಗಣದಲ್ಲಿ ದಸರಾ ಅಂಗವಾಗಿ ಮಂಗಳವಾರ ಆಯೋಜಿಸಿದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರದರ್ಶನದಲ್ಲಿ ಸಾಬೀತಾಯಿತು.
ಈ ಪ್ರಸಂಗದಲ್ಲಿ ಮುಸ್ಲಿಂ ಸಮುದಾಯದ ವಿಟ್ಲದ ಅರ್ಷಿಯಾ ಖಾನ್ ಅವರು ಅವರು ಶ್ರೀದೇವಿಯಾಗಿ ಕಾಣಿಸಿಕೊಂಡು ಕರಾವಳಿಯ ಸೌಹಾರ್ದ ಪರಂಪರೆ ಮತ್ತು ಯಕ್ಷಗಾನದ ಸಾಂಸ್ಕೃತಿಕ ವೈಶಾಲ್ಯವನ್ನು ತಮ್ಮ ಅಭಿನಯದ ಮೂಲಕ ಅನಾವರಣಗೊಳಿಸಿದರು. ಇನ್ನು ಕ್ರೈಸ್ತ ಸಮುದಾಯದ ವಿಲ್ಸನ್ ಸಲ್ಡಾನ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರ್ಮಿಕ ಸೌಹಾರ್ದತೆಯನ್ನು ಪ್ರದರ್ಶಿಸಿದರು. ಈ ಪ್ರಸಂಗದಲ್ಲಿ ಕಟೀಲು, ಪಾವಂಜೆ ಮೊದಲಾದ ತೆಂಕು ತಿಟ್ಟು ಮೇಳಗಳ ಪ್ರಸಿದ್ಧ ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು.
ಯಕ್ಷಗಾನ ಗುರು ಕದ್ರಿ ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಅರ್ಷಿಯಾ ಖಾನ್, ಕದ್ರಿ ದೇವಾಲಯದ ಆವರಣದಲ್ಲಿರುವ ಕದಳಿ ಕಲಾ ಕೇಂದ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದಾದ ‘ಶ್ರೀ ದೇವಿ ಮಹಾತ್ಮೆ’ಯಲ್ಲಿ ಈ ಹಿಂದೆ ಶುಂಭ, ನಿಶುಂಭ ಸೇರಿದಂತೆ ಖಳಪಾತ್ರಗಳನ್ನೂ, ಆದಿಮಾಯೆ ಮತ್ತು ಶ್ರೀ ದೇವಿಯ ಪಾತ್ರಗಳನ್ನೂ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅಷ್ಟಭುಜೆಯಾಗಿ, ಶ್ರೀ ದೇವಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಮನಮೋಹಕ ಅಭಿನಯ ಕಲಾಭಿಮಾನಿಗಳ ಗಮನ ಸೆಳೆದಿದೆ. ಯಕ್ಷಗಾನ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆಯಾಗಿ ಗುರುತಿಸಿಕೊಂಡಿರುವ ಅರ್ಷಿಯಾ ಖಾನ್ ಅವರ ಈ ಸಾಧನೆ, ಕರಾವಳಿಯ ಕಲಾಪರಂಪರೆಯ ವಿಶಾಲ ಮನೋಭಾವಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಅರ್ಷಿಯಾ ಖಾನ್ ಅವರ ಶ್ರೀ ದೇವಿ ಪಾತ್ರವನ್ನು ವೀಕ್ಷಿಸಲು ಮಂಗಳೂರು ನಗರ ವ್ಯಾಪ್ತಿಯಲ್ಲದೆ ಜಿಲ್ಲೆಯ ವಿವಿಧ ಮೂಲೆಗಳಿಂದ ಕಲಾ ಪ್ರೇಮಿಗಳು ಆಗಮಿಸಿದ್ದರು. ಕದ್ರಿ ದೇವಳ ಆವರಣ ಪ್ರೇಕ್ಷಕರಿಂದ ತುಂಬಿ ಹೋಗಿತ್ತು. ಅವರ ಪಾತ್ರ ವೀಕ್ಷಿಸಿದ ಬಳಿಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಹಿತ ಗಣ್ಯರು ಅವರನ್ನು ಅಭಿನಂದಿಸಿದರು.
ಯಕ್ಷಗಾನದಲ್ಲಿ ಶ್ರೀದೇವಿಯಂತಹ ಪವಿತ್ರ ಪಾತ್ರವನ್ನು ನಿರ್ವಹಿಸುವ ಕಲಾವಿದರಿಗೆ ವಿಶೇಷ ಸಿದ್ಧತೆ ನಡೆಸಬೇಕಾಗುತ್ತದೆ. ಪಾತ್ರದ ಪಾವಿತ್ರೃಕ್ಕೆ ಚ್ಯುತಿಯಾಗದಂತೆ ನಿರ್ವಹಿಸುವುದು ಅತ್ಯಂತ ಅವಶ್ಯ. ಈ ಹಿನ್ನೆಲೆಯಲ್ಲಿ ಹಲವು ಸಮಯದಿಂದ ಸಸ್ಯಾಹಾರ ಆಹಾರ ಸೇವನೆಯೊಂದಿಗೆ ಕಟ್ಟುನಿಟ್ಟಿನ ವ್ರತಾಚರಣೆಯನ್ನೂ ಕೈಗೊಂಡಿದ್ದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ನೋಡಿ ಪ್ರೋತ್ಸಾಹ ನೀಡಿದ್ದಾರೆ. ಈ ಅವಕಾಶ ತಾಯಿ ಉಳ್ಳಾಲ್ತಿ ದುರ್ಗಾಪರಮೇಶ್ವರಿಯ ಆಶೀರ್ವಾದವೆಂದು ಭಾವಿಸಿದ್ದೇನೆ.
ಅರ್ಷಿಯಾ ಖಾನ್
ಯಕ್ಷಗಾನ ಕಲಾವಿದೆ