

ಕುಂಬಳೆ: ಜನರ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಆರಿಕ್ಕಾಡಿ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಂಡಿದ್ದರೂ, ಅಲ್ಲಿನ ಡಿವೈಡರ್ ಹಾಗೂ ಕಾಂಕ್ರೀಟ್ ಅವಶೇಷಗಳು ಇನ್ನೂ ತೆರವಾಗದ ಕಾರಣ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಟೋಲ್‌ಗೇಟ್‌ನ ಅಡೆತಡೆಗಳನ್ನು ಸಂಪೂರ್ಣ ತೆರವುಗೊಳಿಸದಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅ.17ರಂದು ಬೆಳಗ್ಗೆ ಆರಿಕ್ಕಾಡಿ ಟೋಲ್‌ಗೇಟ್ ಬಳಿ ಅಪಘಾತ ಸಂಭವಿಸಿತ್ತು. ಮಂಗಳೂರಿನಿಂದ ಬರುತ್ತಿದ್ದ ಟೆಂಪೋವೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಅಲ್ಲದೆ ಟೋಲ್ ಪ್ಲಾಜಾದ ಬೃಹತ್ ಕಂಬ ಸಹಿತ ‘ಕುಂಬಳೆ ಟೋಲ್ ಪ್ಲಾಜಾ’ ಎಂಬ ಫಲಕ ಇನ್ನೂ ಹಾಗೇ ಇದೆ. ಇದು ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರರನ್ನು ಅದರಲ್ಲೂ ಮೊದಲ ಸಲ ಸಂಚರಿಸುವವರಿಗೆ ತೀವ್ರ ಗೊಂದಲ ಉಂಟು ಮಾಡುತ್ತಿದೆ. ಟೋಲ್ ಸಂಗ್ರಹವಿದೆ ಎಂದು ಭಾವಿಸಿ ಅವರು ವಾಹನ ನಿಧಾನಗೊಳಿಸಿ ಟೋಲ್‌ಗಾಗಿ ಮೇಲೆ-ಕೆಳಗೆ ನೋಡುವಾಗ ಹಿಂಬದಿಯಿಂದ ವೇಗವಾಗಿ ಬರುವ ಇತರ ವಾಹನಗಳು ವೇಗ ನಿಯಂತ್ರಿಸಲಾಗದೆ ಗೊಂದಲಕ್ಕೊಳಗಾಗಿ ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರಸ್ತೆ ಮಧ್ಯದಲ್ಲಿರುವ ಡಿವೈಡರ್‌ಗಳು ಸೇರಿದಂತೆ ಎಲ್ಲ ಅಡೆತಡೆ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.