ಕನ್ನಡೇತರ ಅಧಿಕಾರಿಗಳ ನೇಮಕ

ಕಾಸರಗೋಡು-ಮಂಜೇಶ್ವರ ಬಿಆರ್‌ಸಿಗೆ ಮಲಯಾಳಿಗರಿಗೆ ಮನ್ನಣೆ
ಮಂಜೇಶ್ವರ ಹಾಗೂ ಕಾಸರಗೋಡು ಬಿಆರ್‌ಸಿಗೆ ಬ್ಲಾಕ್ ಕೋರ್ಡಿನೇಟರ್‌ಗಳ ನೇಮಕದ ಬಗ್ಗೆ ಸರ್ಕಾರ ಹೊರಡಿಸಿರುವ ಸುತ್ತೋಲೆ.
ಮಂಜೇಶ್ವರ ಹಾಗೂ ಕಾಸರಗೋಡು ಬಿಆರ್‌ಸಿಗೆ ಬ್ಲಾಕ್ ಕೋರ್ಡಿನೇಟರ್‌ಗಳ ನೇಮಕದ ಬಗ್ಗೆ ಸರ್ಕಾರ ಹೊರಡಿಸಿರುವ ಸುತ್ತೋಲೆ.
Published on: 

ಕಾಸರಗೋಡು: ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಾಗಿದ್ದು, ಇಲ್ಲಿ ಅನೇಕ ಕನ್ನಡ ಮಾಧ್ಯಮ ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರೂ ಇಲ್ಲಿನ ಪ್ರಮುಖ ಹುದ್ದೆಗಳಿಗೆ ಮಲಯಾಳಿ ಸಿಬ್ಬಂದಿಯ ನೇಮಕವನ್ನು ಸರ್ಕಾರ ಮುಂದುವರಿಸಿದ್ದು ಮತ್ತೆ ಕನ್ನಡಿಗರ ವಿರೋಧಕ್ಕೆ ಕಾರಣವಾಗುತ್ತಿದೆ. ಶಿಕ್ಷಣ ಇಲಾಖೆಯ ಪ್ರಮುಖ ಹುದ್ದೆಗಳಿಗೆ ಕನ್ನಡ ಭಾಷೆ ತಿಳಿದಿರುವ ಹಾಗೂ ಕನ್ನಡ ಮಾಧ್ಯಮ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಶಿಕ್ಷಕರನ್ನು ನೇಮಕ ಮಾಡುವಂತೆ ಆದೇಶವಿದ್ದರೂ, ಕನ್ನಡಿಗರ ಬೇಡಿಕೆ ನಿರ್ಲಕ್ಷಿಸಿ ಮತ್ತೆ ಮಲಯಾಳಿಗಳನ್ನು ನೇಮಕ ಮಾಡಲಾಗಿದೆ.

ಶಿಕ್ಷಣ ಇಲಾಖೆ ಕಾರ್ಯದರ್ಶಿಯ ಇತ್ತೀಚಿನ ಆದೇಶದಂತೆ ಮಂಜೇಶ್ವರ ಬಿಆರ್‌ಸಿ(ಬ್ಲಾಕ್ ರಿಸೋರ್ಸ್ ಸೆಂಟರ್)ಗೆ ಬ್ಲಾಕ್ ರಿಸೋರ್ಸ್ ಕೋ-ಆರ್ಡಿನೇಟರ್‌ಗಳಾಗಿ ಶಬನಾ ಹಾಗೂ ಕಾಸರಗೋಡು ಬಿಆರ್‌ಸಿ ಕೇಂದ್ರಕ್ಕೆ ಸುಬೈರ್ ಅವರನ್ನು ನೇಮಕ ಮಾಡಲಾಗಿದೆ. ಇವರಿಗೆ ಕನ್ನಡ ಭಾಷಾ ಜ್ಞಾನವಿಲ್ಲದಿರುವುದು ಮತ್ತೆ ಸಮಸ್ಯೆ ಹುಟ್ಟುಹಾಕಿದೆ. ಈ ನೇಮಕಾತಿ ಕನ್ನಡ ಮಾಧ್ಯಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎಂದು ಕನ್ನಡಪರ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಕನ್ನಡ ಮಾಧ್ಯಮ ಶಿಕ್ಷಕರ ನಿರ್ಲಕ್ಷ್ಯ

ಈ ಹುದ್ದೆಗಳಿಗೆ ಕನ್ನಡ ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕರಾದ ಕಾಯರ್‌ಕಟ್ಟೆ ಶಾಲೆಯ ಶಿಕ್ಷಕರಾದ ಅಶ್ರಫ್ ಹಾಗೂ ಮಂಗಲ್ಪಾಡಿ ಎಲ್‌ಪಿ ಶಾಲೆ ಮುಖ್ಯಶಿಕ್ಷಕ ಇಸ್ಮಾಯಿಲ್ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸದೆ ಕನ್ನಡ ಭಾಷೆ ತಿಳಿಯದವರನ್ನು ನೇಮಕ ಮಾಡುವ ಮೂಲಕ ಕನ್ನಡಕ್ಕೆ ಅನ್ಯಾಯ ಎಸಗಲಾಗಿದೆ. ಕನ್ನಡ ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಭಾಷಾ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಆದೇಶವನ್ನು ತಕ್ಷಣ ಮರುಪರಿಶೀಲಿಸಬೇಕು. ಅಲ್ಲದೆ ಅಭ್ಯರ್ಥಿಗಳ ಕನ್ನಡ ಭಾಷಾ ಜ್ಞಾನ, ಕನ್ನಡ ಮಾಧ್ಯಮ ಪ್ರದೇಶದಲ್ಲಿ ಸೇವಾ ಅನುಭವ ಹಾಗೂ ಅರ್ಹತೆಗಳಿಗೆ ಸೂಕ್ತ ಆದ್ಯತೆ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅರ್ಜಿ ಸಲ್ಲಿಸಿದ ಅರ್ಹ ಕನ್ನಡ ಮಾಧ್ಯಮ ಶಿಕ್ಷಕರನ್ನು ನ್ಯಾಯಸಮ್ಮತವಾಗಿ ಪರಿಗಣಿಸಿ, ಆಯ್ಕೆ ಮಾನದಂಡ, ಮೆರಿಟ್ ಪಟ್ಟಿ ಮತ್ತು ಸಂಬಂಧಿತ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಮಧ್ಯ ಪ್ರವೇಶಿಸಲಿ

ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಬಿಆರ್‌ಸಿ ಹಾಗೂ ಇತರ ಪ್ರಮುಖ ಶೈಕ್ಷಣಿಕ ಹುದ್ದೆಗಳಿಗೆ ಕನ್ನಡ ತಿಳಿದಿರುವ ಅರ್ಹ ಅಧಿಕಾರಿಗಳು ಮತ್ತು ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ, ಇಲಾಖೆ ಇದನ್ನು ಮರೆಮಾಚುತ್ತಿದೆ. ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಯಾವುದೇ ಭಾಷಾ ಅನನುಕೂಲತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮನವಿ, ನಿಯೋಗ ಭೇಟಿ, ಶಾಂತಿಯುತ ಪ್ರತಿಭಟನೆ ಹಾಗೂ ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕನ್ನಡ ಮಾಧ್ಯಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ಪಠ್ಯಕ್ರಮದ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸುವ ಬಿಆರ್‌ಸಿ ಹುದ್ದೆಗೆ ಕನ್ನಡ ಭಾಷಾ ಜ್ಞಾನ ಹೊಂದಿರುವ ಅಧಿಕಾರಿಗಳ ನೇಮಕಾತಿ ಅಗತ್ಯವೆಂದು ಕನ್ನಡ ಮಾಧ್ಯಮ ಸಂಘಟನೆಗಳು ಒತ್ತಾಯಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net