ಆಟೋ ಚಾಲಕರಿಂದ ಆಂಬುಲೆನ್ಸ್ ಕೊಡುಗೆ

ಬಡಕಬೈಲ್ ರಿಕ್ಷಾಪಾರ್ಕ್‌ನಲ್ಲಿ ಉಚಿತ ಸೇವೆ
ರಿಕ್ಷಾ ನಿಲ್ದಾಣದ ಬಳಿ ಆಂಬುಲೆನ್ಸ್.
ರಿಕ್ಷಾ ನಿಲ್ದಾಣದ ಬಳಿ ಆಂಬುಲೆನ್ಸ್.
Published on: 

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ರಿಕ್ಷಾ ಚಾಲಕರೇ ಸಂಗ್ರಹಿಸಿದ ಹಣದಿಂದ ಊರಿನ ಜನರ ತುರ್ತು ಆರೋಗ್ಯ ಸೇವೆಗಾಗಿ ಉಚಿತ ಆಂಬುಲೆನ್ಸ್ ಕೊಡುಗೆ ನೀಡಿದ ಅಪರೂಪದ ಕಾರ್ಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಪೊಳಲಿ ಸಮೀಪದ ಕರಿಯಂಗಳ ಗ್ರಾಮದ ಬಡಕಬೈಲ್ ನವೋದಯ ಆಟೋರಿಕ್ಷಾ ಚಾಲಕರು-ಮಾಲೀಕರ ಸಂಘದ ವತಿಯಿಂದ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.

ಬಡಕಬೈಲ್‌ನಲ್ಲಿ ಸುಮಾರು 26 ರಿಕ್ಷಾಗಳಿದ್ದು, ರಿಕ್ಷಾ ಸ್ಟಾೃಂಡ್ ಸಮೀಪ ಆಂಬುಲೆನ್ಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಿಕ್ಷಾ ಚಾಲಕರೇ ಆಂಬುಲೆನ್ಸ್ ಡ್ರೈವರ್‌ಗಳಾಗಿ ಸೇವೆ ನೀಡಲಿದ್ದಾರೆ. ಕರಿಯಂಗಳ ಹಾಗೂ ಅಮ್ಮುಂಜೆ ಗ್ರಾಮ ವ್ಯಾಪ್ತಿಯ ಜನರಿಗೆ ಈ ಸೇವೆ ದೊರೆಯಲಿದೆ. ಸಂಘದ ಪ್ರಸಕ್ತ ಅಧ್ಯಕ್ಷ ಮೊಹಮ್ಮದ್ ಶರೀಫ್ ನೇತೃತ್ವದಲ್ಲಿ ಆಂಬುಲೆನ್ಸ್ ಕಾರ್ಯನಿರ್ವಹಿಸಲಿದೆ.

ರಿಕ್ಷಾ ಚಾಲಕ, ಮಾಲೀಕರ ಪಿಗ್ಮಿ ಹಣ

ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ವಾಹನ ಖರೀದಿಸಿ ಮೈಸೂರಿನಲ್ಲಿ ಆಂಬುಲೆನ್ಸ್‌ಗೆ ಬೇಕಾದ ಪರಿಕರಗಳನ್ನು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಜೋಡಿಸಲಾಗಿದೆ. ಇದರ ಹಣವನ್ನು ಪಿಗ್ಮಿ ಸ್ವರೂಪದಲ್ಲಿ ಎಲ್ಲ ರಿಕ್ಷಾ ಚಾಲಕ-ಮಾಲೀಕರಿಂದ ಪಡೆದು ಸಂಗ್ರಹಿಸಲಾಗಿದೆ. ಜತೆಗೆ ಊರವರು ಹಾಗೂ ದಾನಿಗಳು ವಿಶೇಷ ನೆರವು ನೀಡಿದ್ದಾರೆ.

ಗ್ರಾಮದ ಅದೆಷ್ಟೋ ಮಂದಿಯನ್ನು ರಿಕ್ಷಾದಲ್ಲಿ ತುರ್ತು ಸೇವೆಗೆಂದು ಕರೆದುಕೊಂಡು ಹೋಗುವಾಗ ರಿಕ್ಷಾ ಚಾಲಕರಿಗೆ ಹಲವು ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಈ ಭಾಗದಲ್ಲಿ ಆಂಬುಲೆನ್ಸ್ ಸೇವೆ ಬೇಕು ಎಂಬ ನಿರ್ಧಾರ ಮಾಡಲಾಗಿತ್ತು. ಆ.15ರಂದು ಈ ಪ್ರಕ್ರಿಯೆಗೆ ಚಾಲನೆ ನೀಡಿ ಎಲ್ಲರ ಸಹಕಾರದಿಂದ ಆಂಬುಲೆನ್ಸ್ ನ.1ರಂದು ಲೋಕಾರ್ಪಣೆಗೊಂಡಿದೆ ಎನ್ನುತ್ತಾರೆ ಆಟೋ ಚಾಲಕ ಮಾಲೀಕರ ಸಂಘದ ನಿರ್ದೇಶಕ ಅಹ್ಮದ್ ಬಷೀರ್.

ಸಮಾಜ ಸೇವೆಗೆ ಸದಾ ಸಿದ್ಧ

ಪ್ರತಿ ತಿಂಗಳು ರಿಕ್ಷಾ ಚಾಲಕರಿಂದ 100 ರೂ. ಪಡೆದು ಅಶಕ್ತರಿಗೆ ನೆರವು ನೀಡುವ ಕಾರ್ಯ ನಡೆಸಲಾಗುತ್ತಿದೆ. 4 ಲಕ್ಷ ರೂ.ಗಿಂತ ಅಧಿಕ ಹಣ ವಿವಿಧ ಕಾರ್ಯಗಳಿಗೆ ರಿಕ್ಷಾ ಚಾಲಕರು-ಮಾಲೀಕರಿಂದ ಸಂಗ್ರಹಿಸಲಾಗಿದೆ. ಮಕ್ಕಳ ಶಿಕ್ಷಣಕ್ಕೆ ನೆರವು, ಅನಾರೋಗ್ಯ ಪೀಡಿತರಿಗೆ ನೆರವು ಸೇರಿ ವಿವಿಧ ಆಯಾಮದಲ್ಲಿ ರಿಕ್ಷಾ ಚಾಲಕರು ಊರಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಸಂಘದ ಕೋಶಾಧಿಕಾರಿ ಶೂರದಾಸ್

ಊರಿನಲ್ಲಿ ಯಾವುದೇ ತುರ್ತು ಸಂಭವಿಸಿದಾಗ, ಆರೋಗ್ಯ ಸೇವೆ ಬೇಕಾದಾಗ ಈ ಭಾಗದಲ್ಲಿ ಆಂಬುಲೆನ್ಸ್ ಸೇವೆ ತಕ್ಷಣಕ್ಕೆ ಸಿಗುತ್ತಿರಲಿಲ್ಲ. ಅದೆಷ್ಟೋ ಬಾರಿ ರಿಕ್ಷಾದಲ್ಲಿಯೇ ತುರ್ತು ಆರೋಗ್ಯ ಸೇವೆಗಾಗಿ ಜನರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಘಟನೆ ಸಂಭವಿಸಿದೆ. ಇದಕ್ಕಾಗಿ ರಿಕ್ಷಾ ಚಾಲಕ, ಮಾಲೀಕರೇ ಸೇರಿ ದಾನಿಗಳ ನೆರವಿನಿಂದ ಆಂಬುಲೆನ್ಸ್ ಖರೀದಿಸಿ ಊರಿನ ಬಳಕೆಗೆ ನೀಡಲಾಗಿದೆ.
ಚಂದ್ರಶೇಖರ ಸುವರ್ಣ ಸ್ಥಾಪಕ ಅಧ್ಯಕ್ಷರು ನವೋದಯ ಆಟೋರಿಕ್ಷಾ ಚಾಲಕರು-ಮಾಲೀಕರ ಸಂಘ