

ಮೂಡುಬಿದಿರೆ: ಸರ್ವಾಂಗಾಸನದಲ್ಲಿ ನಿರಂತರವಾಗಿ ಆಸನ ನಿರ್ವಹಿಸಿದ ಸಾಧನೆಗಾಗಿ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ವಿದ್ಯಾರ್ಥಿ ಪಿ.ಕೆ.ವಿಕಾಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.
ಬೆಳ್ತಂಗಡಿ ಮೂಲದ ವಿಕಾಸ್ ಐದನೇ ತರಗತಿಯಿಂದ ಯೋಗಾಭ್ಯಾಸ ಆರಂಭಿಸಿದ್ದು, ಕಳೆದ 11 ವರ್ಷಗಳಿಂದ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಸವಾರ್ಂಗಾಸನ ಪ್ರದರ್ಶನದಲ್ಲಿ ಸಮತೋಲನ, ದೈಹಿಕ ಸಾಮರ್ಥ್ಯ, ನಮ್ಯತೆ, ಸ್ಥಿರತೆ, ಏಕಾಗ್ರತೆ ಹಾಗೂ ಸಹನಶಕ್ತಿಯನ್ನು ಪ್ರದರ್ಶಿಸಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯೋಗ ಕ್ಷೇತ್ರದಲ್ಲಿ ಹಲವು ಸಾಧನೆ ಮಾಡಿರುವ ವಿಕಾಸ್ 2023, 2024 ಹಾಗೂ 2025ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಯೋಗ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 2022ರ ಡಬ್ಲ್ಯುಎಫ್‌ಎಫ್ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
2024ರಲ್ಲಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಾಷ್ಟ್ರೀಯಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರು, 2025ರ ಎಯಾನ್ ವೈದ್ಯಕೀಯ ಸಂಸ್ಥೆಯ ರಾಷ್ಟ್ರೀಯಮಟ್ಟದ ಸ್ಪರ್ಧೆ ಹಾಗೂ 2021ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಯೋಗ ಸ್ಪರ್ಧೆಗಳ ನಿರ್ಣಾಯಕರಾಗಿಯೂ ವಿಕಾಸ್ ಸೇವೆ ಸಲ್ಲಿಸುತ್ತಿದ್ದಾರೆ.