ವಿಶ್ವಸಂಸ್ಥೆಯ ಹೆಸರಿನಲ್ಲಿ 57.31 ಲಕ್ಷ ರೂ. ಸೈಬರ್ ವಂಚನೆ ಆರೋಪ

 ವಿಶ್ವಸಂಸ್ಥೆಯ ಹೆಸರಿನಲ್ಲಿ 57.31 ಲಕ್ಷ ರೂ. ಸೈಬರ್ ವಂಚನೆ ಆರೋಪ
Published on: 

ಮಂಗಳೂರು: ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿರುವ ಹೈಕಮಿಷನರ್ ಕಚೇರಿ ಹೆಸರಿನಲ್ಲಿ ವ್ಯವಹಾರದ ಆಮಿಷವೊಡ್ಡಿ, ಅಗ್ನಿಶಾಮಕ ಉಪಕರಣಗಳ ಮಾರಾಟಗಾರ್ತಿಯೊಬ್ಬರಿಂದ 57,31,175 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

44 ವರ್ಷದ ದೂರುದಾರ ಮಹಿಳೆಯ ಪತಿಗೆ ಕೀನ್ಯಾ ದೇಶದ ನೈರೋಬಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡ ನಿತೇಶ್ ಕುಮಾರ್ ಎಂಬಾತ ವಾಟ್ಸ್‌ಪ್ ಮೂಲಕ ಕರೆ ಮಾಡಿದ್ದಾನೆ. ತಾನು ಹೈಕಮಿಷನರ್ ಕಚೇರಿ ಸಂಸ್ಥೆಯ ಉದ್ಯೋಗಿಯಾಗಿದ್ದು, ಉಡುಪಿ ಜಿಲ್ಲೆಯ ಕಾಪು ಮೂಲದವನು ಎಂದು ಹೇಳಿಕೊಂಡಿದ್ದಾನೆ. ಸಂಸ್ಥೆಗೆ ಮಹಿಳೆ ಮಾರಾಟ ಮಾಡುವ ಫೈರ್ ಎಕ್ಸ್‌ಟಿಂಗ್ವಿಷರ್‌ಗಳನ್ನು ಖರೀದಿಸುವ ಆಸಕ್ತಿ ಇದೆ ಎಂದು ತಿಳಿಸಿ, ತನ್ನ ಮೇಲಧಿಕಾರಿ ರಾಜಗುರು ರೆಡ್ಡಿಯಾರ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾನೆ.

ನಂತರ ರಾಜಗುರು ರೆಡ್ಡಿಯಾರ್ ಎಂಬಾತ ವಾಟ್ಸ್‌ಪ್ ಕರೆ ಮಾಡಿ, ಅಗ್ನಿಶಾಮಕ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಕೋಟೇಶನ್ ನೀಡುವಂತೆ ತಿಳಿಸಿದ್ದಾನೆ. ವ್ಯವಹಾರ ಮುಂದುವರಿಸಲು ಕೀನ್ಯಾ ದೇಶದ ನಿಯಮಗಳ ಹೆಸರಿನಲ್ಲಿ ನೋಂದಣಿ ಪ್ರಮಾಣಪತ್ರ, ಹಣ ಅಕ್ರಮ ವರ್ಗಾವಣೆ ತಡೆ ಪ್ರಮಾಣಪತ್ರ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಪ್ರಮಾಣಪತ್ರ ಹಾಗೂ ಹಣಕಾಸು ಗುಪ್ತಚರ ಪ್ರಾಧಿಕಾರದ ಪ್ರಮಾಣಪತ್ರಗಳನ್ನು ಮಾಡಿಸಬೇಕಿದೆ ಎಂದು ಹೇಳಿದ್ದಾನೆ. ಜೊತೆಗೆ ವಿಮೆ ಮತ್ತು ಬ್ಯಾಂಕ್ ಸ್ಟೋರೇಜ್ ಶುಲ್ಕವನ್ನೂ ಪಾವತಿಸುವಂತೆ ಒತ್ತಾಯಿಸಿದ್ದಾನೆ.

ಆರೋಪಿಗಳ ಮಾತನ್ನು ನಂಬಿದ ಮಹಿಳೆ, 2026ರ ಫೆ.23ರಿಂದ ಜೂನ್ 29ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಹಾಗೂ ನೆಫ್ಟ್ ಮೂಲಕ ಹಂತ ಹಂತವಾಗಿ ಒಟ್ಟು 57,31,175 ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಆರೋಪಿಗಳು ಮತ್ತೆ ಹಣ ಕಳುಹಿಸುವಂತೆ ಕೇಳಿಕೊಂಡಾಗ ಮಹಿಳೆಗೆ ಅನುಮಾನ ಬಂದಿದೆ. ಹಣವನ್ನು ಹಿಂದಿರುಗಿಸುವಂತೆ ಹಲವು ಬಾರಿ ಸಂಪರ್ಕಿಸಿದರೂ ಆರೋಪಿಗಳು ವಿವಿಧ ಕಾರಣಗಳನ್ನು ನೀಡಿ ತಪ್ಪಿಸಿಕೊಂಡಿದ್ದು, ನಂತರ ಕರೆಗಳನ್ನೂ ಸ್ವೀಕರಿಸಿಲ್ಲ ಎನ್ನಲಾಗಿದೆ. ಇದರಿಂದ ತಾನು ಆನ್‌ಲೈನ್ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಹೈಕಮಿಷನರ್ ಕಚೇರಿ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ವಂಚನೆ ಎಸಗಿರುವ ಆರೋಪಿಗಳಾದ ನಿತೇಶ್ ಕುಮಾರ್ ಮತ್ತು ರಾಜಗುರು ರೆಡ್ಡಿಯಾರ್ ಅವರನ್ನು ಪತ್ತೆಹಚ್ಚಿ, ಹಣ ವಸೂಲಿ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.