ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಭಾರತೀಯ ಸೇನಾ ನೇಮಕಾತಿ ರ‌್ಯಾಲಿ ಜ.28ರಿಂದ ಫೆ.14ರವರೆಗೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದ್ದು, ಪೂರ್ವಸಿದ್ಧತೆ ಸಭೆ ಶನಿವಾರ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿತು.
ದ.ಕ. ಜಿಲ್ಲೆ ಸೇನಾ ನೇಮಕಾತಿ ನಿರ್ದೇಶಕ ಸೋನು ಮಹಾರಾಜನ್ ಮಾಹಿತಿ ನೀಡಿ, ರ‌್ಯಾಲಿಯಲ್ಲಿ 15ರಿಂದ 20 ಸಾವಿರ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ವಸತಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಉಮಾನಾಥ ಕೋಟ್ಯಾನ್ ಮಾತನಾಡಿ, ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಗೆ ಆಯ್ಕೆಯಾಗಬೇಕು. ದೇಶಸೇವೆಯ ಪವಿತ್ರ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಜಿಲ್ಲಾ ಕ್ರೀಡಾ ಇಲಾಖೆ ನಿರ್ದೇಶಕ ಪ್ರದೀಪ್ ಡಿಸೋಜ, ಜಿಲ್ಲಾ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ನಿರ್ದೇಶಕ ಪ್ರದೀಪ್ ಡಿಸೋಜ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಅರಣ್ಯಾಧಿಕಾರಿ ಕಿಶೋರ್ ಕುಮಾರ್, ಮೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೋಹನ್ ಟಿ., ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡರು.