

ಕಾಸರಗೋಡು: ಮೂವತ್ತು ವಷರ್ಗಳ ಹಿಂದೆ ಕಾಸರಗೋಡಿನಲ್ಲಿ ನಡೆದ ಪ್ರದೀಪ್ ಕುಮಾರ್ ಕೊಲೆ ಪ್ರಕರಣದ ಆರೋಪಿ ತಳಂಗರೆ ನಿವಾಸಿ ಗಬ್ಬರ್ ಅಶ್ರಫ್‌ನನ್ನು ಆಂಧ್ರಪ್ರದೇಶದಲ್ಲಿ ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
1996 ಅ.5ರಂದು ರಾತ್ರಿ ಪ್ರದೀಪ್ ಕುಮಾರ್ ಅವರನ್ನು ಆಟೋದಲ್ಲಿ ತಳಂಗರೆಗೆ ಕರೆದೊಯ್ದು, ರೈಲ್ವೆ ಸೇತುವೆ ಬಳಿ ತಲೆಗೆ ಹೊಡೆದು ಬಳಿಕ ಕತ್ತಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಆದರೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು. ಇನ್ನೊಬ್ಬ ಆರೋಪಿ ಅಶ್ರಫ್ ಅಂದಿನಿಂದ ತಲೆಮರೆಸಿಕೊಂಡಿದ್ದ. ಹಳೇ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡಕ್ಕೆ ಅಶ್ರಫ್ ಆಂಧ್ರಪ್ರದೇಶದ ಚಾರ್ಮಿನಾರ್ ಬಳಿ ಕುಟುಂಬದೊಂದಿಗೆ ವಾಸಿಸುತ್ತಿರುವ ಮಾಹಿತಿ ಲಭಿಸಿತ್ತು. ಅದರಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲು ಗೋಳಿಯಡ್ಕ ಶಾಂತಿಪಳ್ಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಜೂಜಿಗೆ ಬಳಸಿದ್ದ 1,620 ರೂ. ನಗದು ಹಾಗೂ ಐದು ಅಂಕದ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಕರಂದಕ್ಕಾಡಿನ ದಿನೇಶ (26), ಮುಕ್ಕಿಕ್ಕರದ ಈಶ್ವರ (62), ಮುಣ್ಷಿಯತಡ್ಕದ ಬಾಲಕೃಷ್ಣ ರೈ (46), ಕೋಡಿಯಡ್ಕದ ಸರವು ರೈ (42), ಕೂಡ್ಲಿನ ಜಯಂತ (48) ಹಾಗೂ ಪಡಿಯಡ್ಕದ ಅಶೋಕನ್ (55) ಬಂಧಿತರು. ಬಳಿಕ ಎಲ್ಲರನ್ನೂ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳ್ಯೂರು ಮದರಿಕ್ಕಾಡ್ ನಿವಾಸಿ, ಕಾಲೇಜು ವಿದ್ಯಾರ್ಥಿನಿ ರಕ್ಷಿತಾ (19) ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಕಾಲೇಜಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಪುತ್ರಿ ವಾಪಸಾಗಿಲ್ಲ ಎಂದು ತಂದೆ ಅಬ್ಬಣ್ಣು ಕೆ. ದೂರಿನಲ್ಲಿ ತಿಳಿಸಿದ್ದಾರೆ.