

ಬೈಂದೂರು: ಕತಾರ್‌ನ ವಿವಿಧ ಭಾಗಗಳಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ, ಭಾಷೆ ಹಾಗೂ ಪರಂಪರೆ ಪ್ರತಿಬಿಂಬಿಸುವ ಸಂಗೀತ, ನೃತ್ಯ, ವಿವಿಧ ಕಲಾ ಪ್ರದರ್ಶನ ನಡೆಯಲಿದ್ದು, ಕತಾರ್‌ನ ಕನ್ನಡಿಗರಿಗೆ ತಮ್ಮ ನಾಡಿನ ಸಂಸ್ಕೃತಿಯನ್ನು ಸಂಭ್ರಮಿಸುವ ವಿಶೇಷ ವೇದಿಕೆಯಾಗಲಿದೆ ಎಂದು ಕತಾರ್ ಕರ್ನಾಟಕ ಸಂಘ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹೇಳಿದರು.
ದೋಹಾ ಭಾರತೀಯ ರಾಯಭಾರ ಕಚೇರಿ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಸಂಯೋಜಿತವಾಗಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ಕತಾರ್ ಕರ್ನಾಟಕ ಸಂಘ ವತಿಯಿಂದ ನ.6ರಂದು ಸಂಜೆ ಅಲ್ ವಕ್ರಾದ ಡಿಪಿಎಸ್ ಎಂಐಎಸ್ ಸಭಾಂಗಣದಲ್ಲಿ ನಡೆಯುವ 71ನೇ ಕರ್ನಾಟಕ ರಾಜ್ಯೋತ್ಸವದ ಕರುನಾಡ ವೈಭವ-2026 ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು.
ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಶೆಟ್ಟಿ, ಸದಸ್ಯರಾದ ಡಾ.ಸಂಜಯ್ ಕುದರಿ, ಮಹೇಶ್ ಗೌಡ ಮೊದಲಾದವರು ಇದ್ದರು. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸ್ವಾಗತಿಸಿದರು. ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು.
ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಉಮಾಶ್ರೀ ಅವರಿಗೆ ಕರುನಾಡ ವೈಭವ-2026ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕತಾರ್ ಕನ್ನಡ ಸಮ್ಮಾನ್ ಪ್ರದಾನ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಘವೇಂದ್ರ, ಜಗ್ಗಪ್ಪ ಹಾಗೂ ಸುಷ್ಮಿತಾ ವಿಶೇಷ ಹಾಸ್ಯದ ರಸದೌತಣ ನೀಡಲಿದ್ದು, ಮೆಹಬೂಬ್ ಸಾಬ್ ಹಾಗೂ ರೇವಣಸಿದ್ಧ ಫುಲಾರಿ ಸಂಗೀತ ವೈಭವ ನಡೆಸಿಕೊಡುವರು. ಕತಾರ್‌ನಲ್ಲಿರುವ ಕರ್ನಾಟಕ ಮೂಲದ ವಿವಿಧ ಸಹೋದರ ಸಂಘಟನೆಗಳ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಪ್ರಣಿತಾ ಕಾರ್ಯಕ್ರಮ ನಿರೂಪಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.