ಗಡಿನಾಡ ಕನ್ನಡಿಗರಿಗಾಗಿ ವಿಶೇಷ ಸಾಂಸ್ಕೃತಿಕ ನೀತಿ

ಬಹುಭಾಷಾ ವಿದ್ವಾಂಸ ‘ಪುವೆಂಪು ನೆನಪು’
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಪುವೆಂಪು ಪ್ರಶಸ್ತಿ ಪ್ರದಾನಿಸಲಾಯಿತು. ಸಲೀಂ ಅಹಮ್ಮದ್, ಎಂ.ವೀರಪ್ಪ ಮೊಲಿ, ಎ.ಕೆ.ಎಂ.ಅಶ್ರಫ್, ಸೋಮಣ್ಣ ಬೇವಿನಮರದ, ಪ್ರಕಾಶ ಮತ್ತೀಹಳ್ಳಿ ಮತ್ತಿತರರು ಇದ್ದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಪುವೆಂಪು ಪ್ರಶಸ್ತಿ ಪ್ರದಾನಿಸಲಾಯಿತು. ಸಲೀಂ ಅಹಮ್ಮದ್, ಎಂ.ವೀರಪ್ಪ ಮೊಲಿ, ಎ.ಕೆ.ಎಂ.ಅಶ್ರಫ್, ಸೋಮಣ್ಣ ಬೇವಿನಮರದ, ಪ್ರಕಾಶ ಮತ್ತೀಹಳ್ಳಿ ಮತ್ತಿತರರು ಇದ್ದರು.
Published on: 

ಮಂಜೇಶ್ವರ: ಗಡಿನಾಡು ಮತ್ತು ಹೊರನಾಡು ಕನ್ನಡಿಗರನ್ನು ಒಳಗೊಂಡಂತೆ ಕರ್ನಾಟಕ ಸರ್ಕಾರ ವಿಶೇಷ ಸಾಂಸ್ಕೃತಿಕ ನೀತಿ ರೂಪಿಸಬೇಕು. ಅವರ ಅಭಿವೃದ್ಧಿಗಾಗಿ ಪ್ರತಿ ಬಜೆಟ್‌ನಲ್ಲೂ ವಿಶೇಷ ಆರ್ಥಿಕ ಪ್ಯಾಕೇಜ್ ಮೀಸಲಿಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ, ಬದಿಯಡ್ಕದ ತುಳು ಭವನ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮಂಜೇಶ್ವರದ ಗಿಳಿವಿಂಡು ಆವರಣದ ಪಾರ್ತಿಸುಬ್ಬ ವೇದಿಕೆಯಲ್ಲಿ ಶನಿವಾರ ನಡೆದ ಬಹುಭಾಷಾ ವಿದ್ವಾಂಸ ಡಾ.ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2026’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಗಡಿನಾಡು, ಹೊರನಾಡು ಕನ್ನಡಿಗರಿಗೆ ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕದ ಕನ್ನಡಿಗರಿಗೆ ದೊರೆಯುವ ಸೌಲಭ್ಯಗಳು ಲಭ್ಯವಾಗಬೇಕು. ಕನ್ನಡ ಅನ್ನ ನೀಡುವ ಭಾಷೆಯಾಗಬೇಕು. ಕನ್ನಡಿಗರನ್ನು ಉಳಿಸಿದರೆ ಅವರು ಭಾಷೆ ಮತ್ತು ಸಂಸ್ಕೃತಿಯನ್ನೂ ಉಳಿಸುತ್ತಾರೆ ಎಂದರು.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿ, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಡಾ.ಪುಣಿಂಚಿತ್ತಾಯರು ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ತುಳು ಲಿಪಿಯ ಪುನರುಜ್ಜೀವನ, ಪ್ರಾಚೀನ ಕೃತಿಗಳ ಶೋಧನೆ ಹಾಗೂ ಕನ್ನಡ-ತುಳು ಭಾಷೆಗಳ ಸಂಬಂಧವನ್ನು ಜಗತ್ತಿಗೆ ಪಸರಿಸುವಲ್ಲಿ ಅವರ ಸೇವೆ ಅನನ್ಯವಾದುದು ಎಂದರು.

ಶಾಫಿ ಬಂಡಸಾಲ ದುಬೈ ರಚಿಸಿದ ಹೃದಯ ಗೀತೆ ಕೃತಿಯನ್ನು ಟಿ.ಎಂ. ಶಹೀದ್ ಬಿಡುಗಡೆಗೊಳಿಸಿದರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಡಾ.ರಮಾನಂದ ಬನಾರಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಪ್ರದರ್ಶನಗಳು ನಡೆದವು.

ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಜನರು ನೆಲೆಸಿರುವ ಕಾಸರಗೋಡು ಬಹುತ್ವದ ಸೇತುವೆಯಾಗಿದೆ. ಈ ಭಾಗದಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಇಲ್ಲಿನ ಜನರ ಬೆಂಬಲಕ್ಕೆ ಕರ್ನಾಟಕ ಸರ್ಕಾರ ಸದಾ ನಿಲ್ಲಲಿದೆ.
ಸಲೀಂ ಅಹಮ್ಮದ್ ವಿಧಾನ ಪರಿಷತ್ ಸಭಾಪತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net