

ಸುಬ್ರಹ್ಮಣ್ಯ: ಮದ್ಯಪಾನ ತ್ಯಜಿಸಿ ಸ್ವಾವಲಂಬಿ ಜೀವನ ನಡೆಸಲು ಮದ್ಯವರ್ಜನ ಶಿಬಿರಗಳು ಅಡಿಪಾಯವಾಗಿದೆ. ಒಂದು ವಾರದ ಶಿಬಿರದಲ್ಲಿ ಎಲ್ಲವನ್ನೂ ಮರೆತು ಸ್ವಇಚ್ಛೆಯಿಂದ ಭಾಗವಹಿಸಬೇಕು. ಕುಡಿತದ ಚಟದಿಂದ ಕಳೆದುಕೊಳ್ಳುವುದೇ ಹೆಚ್ಚು. ಕಳೆದುಕೊಂಡಿರುವುದನ್ನು ಮದ್ಯಪಾನ ತ್ಯಜಿಸಿದಾಗ ಪಡೆದುಕೊಳ್ಳಲು ಸಾಧ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಪಂಜ ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಕೆ.ಎಸ್.ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ದೇರಳಕಟ್ಟೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಆಶ್ರಯದಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಂಗಣದಲ್ಲಿ 2140ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಗತಿಪರ ಕೃಷಿಕ ಶ್ರೇಯಾಂಶು ಕುಮಾರ್ ಶೆಟ್ಟಿಮೂಲೆ ಶಿಬಿರ ಉದ್ಘಾಟಿಸಿದರು. ಅಖಿಲ ಭಾರತ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಎಂ.ವೆಂಕಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ.ರಾಮಯ್ಯ ಭಟ್, ಪಂಬೆತ್ತಾಡಿ ಸಹಕಾರಿ ಸಂಘದ ನಿರ್ದೇಶಕ ಜಾಕೆ ಮಾಧವ ಗೌಡ, ಪಂಜ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ, ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಭರತ್ ನೆಕ್ರಾಜೆ, ಪ್ರಮುಖರಾದ ನೇಮಿರಾಜ್ ಪಲ್ಲೋಡಿ, ಪಿ.ಸಿ.ಜಯರಾಮ, ವಿಮಲಾ ರಂಗಯ್ಯ, ಮೋನಪ್ಪ ಗೌಡ ಇದ್ದರು.
ಪ್ರಕಾಶ್ ಆಚಾರ್ಯ ಪ್ರಾರ್ಥಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ, ವಿನೋದ್ ಬೊಳ್ಳಲೆ ವಂದಿಸಿದರು. ಗಣೇಶ್ ಆಚಾರ್ಯ ಪ್ರಸ್ತಾಪಿಸಿದರು. ವಲಯ ಮೇಲ್ವಿಚಾರಕಿ ಮಮತಾ ಎನ್. ನಿರೂಪಿಸಿದರು.