

ಬಂಟ್ವಾಳ: ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿಗಳನ್ನು ಅಧಿಕಾರಕ್ಕೇರಿದ ಬಳಿಕ ಜಾರಿಗೊಳಿಸಿದೆ. ಈ ಮೂಲಕ ಬಡಜನರಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಮೇರಮಜಲು, ಕೊಡ್ಮಾಣ್, ಪುದು ಹಾಗೂ ತುಂಬೆ ಗ್ರಾಮಗಳ ಗ್ಯಾರಂಟಿ ಉತ್ಸವವನ್ನು ಕೊಡ್ಮಾಣ್ ಶಾಲಾ ವಠಾರದಲ್ಲಿ ಉದ್ಘಾಟಿಸಿ ವಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಕುಟುಂಬವನ್ನು ಸಂತೋಷದಿಂದ ಮುನ್ನಡೆಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ತೊಂದರೆಯಾಗಿಲ್ಲ. ಬಂಟ್ವಾಳ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 743 ಕೋಟಿ ರೂ. ವ್ಯಯಿಸಲಾಗಿದ್ದು, ಇದರಲ್ಲಿ 428 ಕೋಟಿ ರೂ. ಗೃಹಲಕ್ಷ್ಮಿ ಯೋಜನೆಗೆ ನೀಡಲಾಗಿದೆ. ಫಲಾನುಭವಿಗಳಿಗೆ ತಲುಪಿದ ಹಣದಿಂದ ರಾಜ್ಯದ ಆರ್ಥಿಕತೆ ಚಲನಶೀಲವಾಗುತ್ತಿದೆ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ವಾತನಾಡಿ, ಗ್ಯಾರಂಟಿ ಯೋಜನೆಗಳು ಮನೆ ಮತ್ತು ಮನಸ್ಸುಗಳನ್ನು ಬೆಳಗಿಸುವ ಉದ್ದೇಶ ಹೊಂದಿವೆ. ಒಳ್ಳೆಯ ಕೆಲಸಗಳ ಮೂಲಕ ಹೆಸರು ಉಳಿಸಬೇಕು ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಚಿವ ಯು.ಟಿ.ಖಾದರ್, ಮಮತಾ ಗಟ್ಟಿ, ಜಯಂತಿ ಪೂಜಾರಿ ಹಾಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಿದ ಬಿಎಲ್‌ಒಗಳನ್ನು ಸನ್ಮಾನಿಸಲಾಯಿತು. ವಿವಿಧ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುವಾರ್ ಸ್ವಾಗತಿಸಿದರು. ಇರ್ಫಾನ್ ಕಲ್ಲಡ್ಕ ನಿರೂಪಿಸಿದರು.