ತುಳುಜನರ ಭಾವನೆಗೆ ಗೌರವ ಕೊಟ್ಟ ಸರ್ಕಾರ

ಪದ್ಮರಾಜ್ ಆರ್. ಪೂಜಾರಿ
ಪದ್ಮರಾಜ್ ಆರ್. ಪೂಜಾರಿ
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ನಿಯೋಜಿತ ಜಿಲ್ಲಾಧ್ಯಕ್ಷ ಪದ್ಮರಾಜ್
ಮಂಗಳೂರು: ರಾಜ್ಯದ ಅಧಿಕೃತ ದ್ವಿತೀಯ ಭಾಷೆಯಾಗಿ ತುಳು ಭಾಷೆಯನ್ನು ಘೋಷಣೆ ಮಾಡಿರುವ ಸೆ. 18 ನಮಗೆ ವಿಶೇಷ ದಿನವಾಗಿದೆ. ತುಳು ಜನರ ಭಾವನೆಗೆ ಸರ್ಕಾರ ಗೌರವ ನೀಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ನ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯ ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಯಾಮಾರಿಸುತ್ತಿದ್ದ ವಿಪಕ್ಷದವರಿಗೆ ಕಾಂಗ್ರೆಸ್ ಸರ್ಕಾರದ ಮಂಗಳೂರಿನ ಸಚಿವ ಸಂಪುಟದ ಮಹತ್ವದ ನಿರ್ಣಯಗಳ ಮೂಲಕ ಉತ್ತರ ನೀಡಿದೆ ಎಂದರು.
ಸಚಿವ ಸಂಪುಟದ ಹಿನ್ನೆಲೆಯಲ್ಲಿ ಸೆ. 17ರಂದು ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶ್ರಾಂತಿ ರಹಿತವಾಗಿ ವಿವಿಧ ಕಡೆ ಸಂಚರಿಸಿ ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯುವ ಕೆಲಸ ಮಾಡಿದ್ದಾರೆ. ಇಂದು ಬೆಳಿಗ್ಗೆ ಮೀನುಗಾರಿಕಾ ಧಕ್ಕೆಗೆ ತೆರಳಿ ಅಲ್ಲಿ ಸುಮಾರು 2 ಗಂಟೆಗಳ ಮೀನುಗಾರರ ಜೊತೆಗಿದ್ದು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಬಗೆಹರಿಸುವ ಭರವಸೆ ನೀಡಿದ್ದಾರೆ. ದ.ಕ. ಜಿಲ್ಲೆಯನ್ನು ಮಂಗಳೂರು ಎಂದು ಮಾಡುವ ನಿಟ್ಟಿನಲ್ಲಿಯೂ ಸಾರ್ವಜನಿಕ ಅಭಿಪ್ರಾಯ ಪಡೆಯಲು ಒತ್ತು ನೀಡಲಾಗಿದೆ ಎಂದರು.
ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಒಂದಾದ ಡಿಸಿ ಮನ್ನಾ ಮಂಜೂರು ಕುರಿತಂತೆ ಪಕ್ಷದ ದಲಿತ ನಾಯಕರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮತ್ತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡುವುದಾಗಿ ಹೇಳಿದ್ದಾರೆ ಎಂದು ಪದ್ಮರಾಜ್ ತಿಳಿಸಿದರು.
2013-18ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದ್ದ 165 ಭರವಸೆಗಳಲ್ಲಿ 158 ಅನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಬಂಡವಾಳ ಹೂಡಿಕೆಯ ಚಿತ್ತ ಮಂಗಳೂರಿಗೆ ಹರಿದು ಬರುವ ನಿಟ್ಟಿನಲ್ಲಿ ಕರಾವಳಿ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಬೆಂಗಳೂರನ್ನು ಮೀರಿ 2ನೇ ಸ್ಥಾನದಲ್ಲಿರುವ ಮಂಗಳೂರಿನಲ್ಲಿ ಅಭಿವೃದ್ಧಿಗೆ ಕಾಲ ಕೂಡಿಬಂದಿದೆ. ಅಭಿವೃದ್ಧಿಯಾಗುವ ಭರವಸೆ ಮೂಡಿದೆ ಎಂದು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಹರೀಶ್ ಕುಮಾರ್, ನಾಯಕರಾದ ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಅಪ್ಪಿ, ಶುಭೋದಯ ಆಳ್ವ, ಅಶ್ರಫ್, ಸೌಹಾನ್, ನವಾಝ್, ಯೋಗೀಶ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net