

ವಿಜಯವಾಣಿ ಸುದ್ದಿಜಾಲ ಗುರುಪುರ
ಬಡವರು, ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕ್ಷಮಿಸುವುದಿಲ್ಲ, ಕ್ಷಮಿಸಲು ಅರ್ಹವಾಗಿಯೂ ಇಲ್ಲ ಎಂದು ಶಾಸಕ ಡಾ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಉತ್ತರ ಮಂಡಲ ವತಿಯಿಂದ ರಾಜ್ಯಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಉಳಾಯಿಬೆಟ್ಟು ಗ್ರಾಪಂ ಪರಿಸರದಲ್ಲಿ ಮಂಗಳವಾರ ‘ನಮ್ಮ ಹಕ್ಕು ನಮಗೆ ನೀಡಿ’ ಎಂಬ ಘೋಷಣೆಯೊಂದಿಗೆ ಆಯೋಜಿಸಲಾದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿ, ಸರ್ಕಾರ ಗೃಹಲಕ್ಷ್ಮಿ ಯೋಜನೆ ಹಣ ಸಮರ್ಪಕವಾಗಿ ಜಮೆ ಮಾಡುತ್ತಿಲ್ಲ. ಮಹಿಳೆಯರಿಗೆ ಸೇರಬೇಕಾದ ಹಣ ಎಲ್ಲಿ ಹೋಯಿತು? ಆ ಹಣ ಯಾರ ಜೇಬಿಗೆ ಸೇರಿದೆ? ಎಂಬ ಪ್ರಶ್ನೆಗೆ ಉತ್ತರಿಸಬೇಕು ಎಂದರು.
ರಾಜ್ಯ ಬಿಜೆಪಿ ವಕ್ತಾರ ವಿಕಾಸ್ ಕುಮಾರ್ ಪುತ್ತೂರು, ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಅಡ್ಯಾರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕಮಲಾಕ್ಷ ತಲ್ಲಿಮಾರು, ಉಳಾಯಿಬೆಟ್ಟು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್, ಜಿಲ್ಲೆಯ ಸಹಸಂಚಾಲಕ ಲೋಹಿತ್ ಅಮೀನ್, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸುಮಿತ್ರಾ ಕರಿಯ, ಹಿರಿಯ ನಾಗರಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಾಮ ಅಮೀನ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಮುಖ ಉಮೇಶ್ ಕೋಟ್ಯಾನ್, ಮನಪಾ ನಿಕಟಪೂರ್ವ ಮೇಯರ್, ಪಂಚಾಯಿತಿ ಮಾಜಿ ಸದಸ್ಯರ ಸಹಿತ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
---ಫೋಟೋ---
ಜಿಯುಆರ್-ಅ-27-ಪ್ರತಿಭಟನೆ-1, 2, 3