ಪ್ರೀತಿಸಿದ ದೂರವಾದ ಪ್ರೇಯಸಿ - ಮನನೊಂದು ಪ್ರಿಯಕರ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಹಲವು ವರ್ಷಗಳಿಂದ ಪ್ರೀತಿಸಿದ್ದ ಯುವತಿ ಬಳಿಕ ದೂರವಾಗಿದ್ದು, ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಶೆಡ್ಡೆ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್ (22) ಮೃತಪಟ್ಟವರು. ಮಾ.21ರಂದು ಘಟನೆ ನಡೆದಿದೆ.
ಪ್ರಕರಣ ವಿವರ: ಆಶಿಕ್ ತಮ್ಮ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಯುವತಿಯನ್ನು ಪ್ರೀತಿಸಿ ಬಳಿಕ ಇಬ್ಬರೂ ಹಲವಾರು ಕಡೆ ಸುತ್ತಾಡಿದ್ದಾರೆ. ಪದವಿ ವ್ಯಾಸಂಗ ಮುಗಿಸಿದ ಬಳಿಕ ಆಶಿಕ್ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ. ಇತ್ತೀಚಿನ ದಿನಗಳಲ್ಲಿ ಪ್ರೇಯಸಿ ಯಾಕೋ ಆಶಿಕ್‌ನಿಂದ ದೂರವಾಗತೊಡಗಿದ್ದು, ಇದು ಆಶಿಕ್‌ಗೆ ಶಾಕ್ ನೀಡಿತ್ತು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರದಲ್ಲಿ ಯುವಕ ತನ್ನ ಪ್ರೇಯಸಿ ಜತೆ ಜಗಳವಾಡಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
ವಾಟ್ಸಪ್ ಚಾಟಿಂಗ್ ತೆರೆದಿಟ್ಟ ಸತ್ಯ: ಆಶಿಕ್ ಸಾವಿನ ಹಿಂದಿನ ಕಾರಣವೇನು ಎಂದು ಹುಡುಕುತ್ತಾ ಹೋದಾಗ ವಾಟ್ಸಪ್ ಚಾಟಿಂಗ್ ಸತ್ಯವನ್ನು ತೆರೆದಿಟ್ಟಿದೆ. ಆಶಿಕ್ ಕಾಸರಗೋಡಿನ ಯುವತಿಯನ್ನು ಪ್ರೀತಿಸುತ್ತಿರುವುದು ಮತ್ತು ಅವರು ಸುತ್ತಾಡುತ್ತಿರುವುದು ಎರಡೂ ಮನೆಯವರಿಗೂ ಗೊತ್ತಿತ್ತು. ಆಶಿಕ್ ಆತ್ಮಹತ್ಯೆಗೆ ಮುನ್ನ ವಿಡಿಯೋ ಕರೆ ಮಾಡಿರುವುದು, ಮೊಬೈಲ್ ಚಾಟಿಂಗ್ ಮಾಡಿರುವುದು ದಾಖಲಾಗಿದೆ. ಈ ವೇಳೆ ಯುವತಿ ಆಶಿಕ್ ಜತೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಸಾಯುವಂತೆ ಪ್ರಚೋದನೆ ನೀಡಿರುವುದು ಮೊಬೈಲ್ ಚಾಟಿಂಗ್‌ನಲ್ಲಿ ಪತ್ತೆಯಾಗಿದೆ. ಇದರಿಂದ ಮನನೊಂದು ಆಶಿಕ್ ಸಾವಿಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ.
ಕಾವೂರು ಠಾಣೆಯಲ್ಲಿ ಯುವತಿ, ಆಕೆಯ ತಾಯಿ ಹಾಗೂ ಇನ್ನೋರ್ವ ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net