ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ತಪಾಸಣೆ ನಡೆಸಿ ದಂಡ ವಿಧಿಸಿದರು.
Published on:
Copied
Follow Us
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ 2026ರ ಜೂನ್ ತಿಂಗಳಿನಿಂದ ಇಲ್ಲಿಯ ವರೆಗೆ 7,490 ಪ್ರಕರಣಗಳನ್ನು ದಾಖಲಿಸಿ, 3,07,600 ರೂ. ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ 1080 ಫುಟ್ ಪಾತ್ ಪಾರ್ಕಿಂಗ್ ಪ್ರಕರಣಗಳಾಗಿವೆ.
ಪಾದಚಾರಿಗಳ ಸುರಕ್ಷತೆ ಹಾಗೂ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ನೋ ಪಾಕಿರ್ಂಗ್, ಫುಟ್ ಪಾತ್ ಪಾಕಿರ್ಂಗ್, ಸಂಚಾರಕ್ಕೆ ಅಡ್ಡಿ ಸೇರಿದಂತೆ ವಿವಿಧ ರೀತಿಯ ಪಾಕಿರ್ಂಗ್ ನಿಯಮಗಳ ಉಲ್ಲಂಘನೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ, ಸಂಚಾರ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹಾಗೂ ವಾಹನಗಳ ಸುಗಮ ಸಂಚಾರದ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ವತಿಯಿಂದ ಆಗಾಗ್ಗೆ ವಿಶೇಷ ಸಂಚಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ.
ನಕಲಿ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಗಳನ್ನು ಬಳಸಿ ಸಂಚರಿಸುವುದು ಮತ್ತು ಅವುಗಳ ಮೂಲಕ ಅಪರಾಧ ಕೃತ್ಯಗಳನ್ನು ಎಸಗುವುದನ್ನು ತಡೆಗಟ್ಟುವ ಉದ್ದೇಶದಿಂದ, ಆ.4ರಿಂದ 12ರ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ 258 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂಬರ್ ಪ್ಲೇಟ್ ಅಳವಡಿಸದೇ ಸಂಚರಿಸುತ್ತಿದ್ದ 74 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 332 ಪ್ರಕರಣಗಳನ್ನು ದಾಖಲಿಸಿ, 3,01,000 ರೂ. ದಂಡ ವಿಧಿಸಲಾಗಿದೆ.
ನಂಬರ್ ಪ್ಲೇಟ್ ಗಳನ್ನು ಸ್ಪಷ್ಟವಾಗಿ, ನಿಯಮಾನುಸಾರ ಹಾಗೂ ವಾಹನಕ್ಕೆ ನಿಗದಿಪಡಿಸಿದ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ವಾಹನ ಮಾಲೀಕರ ಜವಾಬ್ದಾರಿಯಾಗಿದೆ. ಅದ್ದರಿಂದ ನಿಗದಿ ಪಡಿಸಿರುವ ಎಚ್.ಎಸ್.ಆರ್.ಪಿ ನಂಬ್ರ ಪ್ಲೇಟ್ ಗಳನ್ನು ಅಳವಡಿಸಬೇಕು. ಮಂಗಳೂರು ನಗರ ಪೊಲೀಸ್ ವತಿಯಿಂದ ಕೈಗೊಳ್ಳಲಾಗುತ್ತಿರುವ ಈ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿವೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತ ಸಂಚಾರಕ್ಕೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.