

ಕಾಸರಗೋಡು: ಮಂತ್ರವಾದದ ಮೂಲಕ ಅನಾರೋಗ್ಯ, ಮನೆಯಲ್ಲಿರುವ ದೋಷ ನಿವಾರಿಸುವುದಾಗಿ ನಂಬಿಸಿ ಯುವತಿಯ 15 ಪವನ್ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವರ್ಕಾಡಿ ಪಾತೂರು ತಲೆಕ್ಕಿ ನಿವಾಸಿ ಕೆ.ಸಾಬಿತಾ (27) ನೀಡಿದ ದೂರಿನಂತೆ ಬಂಟ್ವಾಳ ನಿವಾಸಿ ಎಂ.ಮುಹಮ್ಮದ್ ಸಫ್ವಾನ್ (31) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮೇ 13ರಂದು ಮುಂಜಾನೆ 3ರ ವೇಳೆ ಮುಹಮ್ಮದ್ ಸಫ್ವಾನ್ ತನ್ನಿಂದ ಚಿನ್ನಾಭರಣಗಳನ್ನು ಪಡೆದುಕೊಂಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಮನೆಯಲ್ಲಿ ಕೆಲವೊಂದು ದೋಷಗಳಿದ್ದು ಅವುಗಳನ್ನು ನಿವಾರಿಸಲು ಚಿನ್ನಾಭರಣ ತರುವಂತೆ ಆತ ಸೂಚಿಸಿದ್ದಾನೆ. ಮಂತ್ರವಾದಿಯ ಮಾತನ್ನು ನಂಬಿದ ಕುಟುಂಬದವರು ಸರ, ಬಳೆ, ಉಂಗುರ ಸೇರಿದಂತೆ ಸುವಾರು 15 ಪವನ್ ಚಿನ್ನಾಭರಣಗಳನ್ನು ಆತನಿಗೆ ನೀಡಿದ್ದಾರೆ. ಚಿನ್ನಾಭರಣಗಳನ್ನು ಪಾತ್ರೆಯೊಂದರಲ್ಲಿ ಹಾಕಿ ನೀರು ತುಂಬಿಸಿ, ಅದಕ್ಕೆ ಅರಿಶಿನ ಪುಡಿ ಬೆರೆಸಿದ ಆತ, ಹಸಿರು ಬಟ್ಟೆಯಿಂದ ಪಾತ್ರೆಯನ್ನು ಮುಚ್ಚಿಟ್ಟಿದ್ದಾನೆ. ಕೆಲವು ದಿನಗಳ ನಂತರ ಚಿನ್ನಾಭರಣಗಳನ್ನು ವಾಪಸ್ ಮಾಡುವುದಾಗಿ ತಿಳಿಸಿದ್ದ ಮಂತ್ರವಾದಿ ಬಳಿಕ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದಾಗ ವಂಚನೆಗೆ ಒಳಗಾಗಿರುವುದು ಕುಟುಂಬದವರಿಗೆ ಅರಿವಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕಾಸರಗೋಡು: ಕಯ್ಯರು ಗ್ರಾಮದ ಜೋಡುಕಲ್ಲಿನ ವಿವಾದಿತ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಾಣ ಕಾರ್ಯ ನಡೆಸಿರುವ ಆರೋಪದ ಮೇಲೆ ಜೋಡುಕಲ್ಲು ಸೇವಾ ಭಾರತಿ ಕ್ಲಬ್ ಕಾರ್ಯದರ್ಶಿ, ಅಧ್ಯಕ್ಷ, ಕಾರ್ಯಕಾರಿ ಸಮಿತಿ ಸದಸ್ಯರ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಸರಗೋಡು ಲೋಕೋಪಯೋಗಿ ಇಲಾಖೆಯ ರಸ್ತೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ. ರಸ್ತೆ ಅಂಚಿಗಿರುವ ಇಲಾಖೆಯ ಭೂಮಿ ಸ್ವಾಧೀನಪಡಿಸಿ ನಿರ್ಮಾಣ ಚಟುವಟಿಕೆ ನಡೆಸಿರುವುದಲ್ಲದೆ, ಇಲಾಖೆ ಸೂಚನೆ ಕಡೆಗಣಿಸಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು: ಕುಂಬಳೆ ಸಮೀಪದ ಕಿದೂರಿನಲ್ಲಿ ಕಾರು ಡಿಕ್ಕಿಯಾದ ಪರಿಣಾಮ ಬೇಳ ಕುಮಾರಮಂಗಲ ನಿವಾಸಿ ದಾಮೋದರ ಎನ್. (48) ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕನ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೆ.9ರಂದು ಸಂಜೆ ದಾಮೋದರ ಅವರು ಕಿದೂರು ಜಂಕ್ಷನ್‌ನಲ್ಲಿ ವಾಹನ ನಿಲ್ಲಿಸಿ ಅಂಗಡಿಗೆ ತರಕಾರಿ ಸಾಗಿಸುವಾಗ ಬಂಬ್ರಾಣ ಭಾಗದಿಂದ ಆಗಮಿಸಿದ ಕಾರು ಇವರಿಗೆ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.