

ಮೈಸೂರು: ಅತ್ಯಾಧುನಿಕ ಶೈಲಿಯ ‘ದಕ್ಷಿಣ ಪಾಕ’ ಸಸ್ಯಾಹಾರಿ ಮತ್ತು ದಿ ಕಾಂಟಿನೆಂಟಲ್ ಇನ್ ಆ್ಯಂಡ್ ಸೂಟ್ಸ್ ಹೋಟೆಲ್ ಗುರುವಾರ ಉದ್ಘಾಟನೆಗೊಂಡಿತು.
ನಗರದ ಮಿನಿ ವಿಧಾನಸೌಧದ ಹತ್ತಿರದ ರೆಸಿಡೆನ್ಸಿ ರಸ್ತೆಯಲ್ಲಿರುವ ಯೂನಿಟಿ ಬಿಲ್ಡಿಂಗ್‌ನಲ್ಲಿ ಸಪ್ತಪದಿ ಅಸೋಸಿಯೇಟ್ಸ್ ವತಿಯಿಂದ ನೂತನವಾಗಿ ತೆರೆಯಲಾಗಿರುವ ಉಭಯ ಹೋಟೆಲ್‌ಗಳು ಗ್ರಾಹಕರಿಗೆ ಸೇವೆ ನೀಡಲು ಮುಕ್ತಗೊಂಡಿತು. ಶಾಸಕರಾದ ತನ್ವೀರ್‌ಸೇಠ್, ಕೆ.ಹರೀಶ್‌ಗೌಡ ಟೇಪ್ ಕತ್ತರಿಸಿ ಉದ್ಘಾಟಿಸಿದರು.
ತನ್ವೀರ್ ಸೇಠ್ ಮಾತನಾಡಿ, ಮೈಸೂರು ಅತಿಥ್ಯಕ್ಕೆ ಹೆಸರುವಾಸಿಯಾಗಿದೆ. ನಗರಕ್ಕೆ ಪ್ರವಾಸಿಗರು ಬಂದಾಗ ಉತ್ತಮವಾದ ಹೋಟೆಲ್, ವಸತಿಗೃಹ ಸೌಲಭ್ಯವನ್ನು ಬಯಸುತ್ತಾರೆ. ಅತಿಥಿ ದೇವೋಭವ ಎನ್ನುವಂತೆ ಉತ್ತಮವಾದ ಊಟ, ತಿಂಡಿ ಒದಗಿಸುವುದು ಮುಖ್ಯವಾಗಿದೆ ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ದಸರಾ ಸೇರಿದಂತೆ ಬೇರೆ ಬೇರೆ ದಿನಗಳಲ್ಲಿ ಪ್ರವಾಸಿಗರು ನಗರಕ್ಕೆ ಬರುತ್ತಾರೆ. ಕೆಲವು ಸಂದರ್ಭದಲ್ಲಿ ಊಟ, ತಿಂಡಿಗೆ ಪರದಾಟವಾಗಲಿದೆ. ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಊಟೋಪಚಾರ ನೀಡುವ ಹೋಟೆಲ್‌ಗಳು ಆರಂಭವಾಗಬೇಕು ಎಂದು ಹೇಳಿದರು.
ಸಪ್ತಪದಿ ಅಸೋಸಿಯೇಟ್ಸ್ ವ್ಯವಸ್ಥಾಪಕ ಪಾಲುದಾರರೂ ಆಗಿರುವ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಪಾಲುದಾರರಾದ ಕೆ.ಆರ್.ಸತ್ಯನಾರಾಯಣ, ಚಿಕ್ಕಕೆಂಪೇಗೌಡ, ಪಾಲಿಕೆ ಮಾಜಿ ಸದಸ್ಯರಾದ ನಂದೀಶ್ ಪ್ರೀತಂ, ಎಂ.ಪ್ರದೀಪ್‌ಕುಮಾರ್, ಕೆ.ಮಹದೇಶ್, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಕರ್ನಾಟಕ ರಾಜ್ಯ ಹೋಟೆಲ್‌ಗಳ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಹಿರಿಯ ಲೆಕ್ಕ ಪರಿಶೋಧಕ ಬಿ.ಎಂ.ನಾಗರಾಜು ಸೇರಿದಂತೆ ಇನ್ನಿತರರಿದ್ದರು.