

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನೆಲಮಂಗಲ ತಾಲೂಕು ಸೋಂಪುರ ಬಳಿಯ ಶಿವಗಂಗೆ ಬೆಟ್ಟಕ್ಕೆ ಕಾಯಕಲ್ಪ ಕಲ್ಪಿಸುವ ಕಾರ್ಯ ಬಿರುಸಿನಿಂದ ಸಾಗಿದೆ.
ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮೇಲುಸ್ತುವಾರಿಯಲ್ಲಿ ಕೆಆರ್‌ಐಡಿಎಲ್ ಸಂಸ್ಥೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶಿವಗಂಗೆ ಬೆಟ್ಟಕ್ಕೆ ಮೆಟ್ಟಿಲು ದುರಸ್ತಿ ಹಾಗೂ ಸ್ಟೀಲ್‌ರೇಲಿಂಗ್ ಅಳವಡಿಸುವ ಕಾಮಗಾರಿ ಚುರುಕುಗೊಂಡಿದೆ. ಇದಕ್ಕಾಗಿ 1 ಕೋಟಿ ರೂ. ಮೀಸಲಿಡಲಾಗಿದ್ದು, ಮೊದಲ ಕಂತಾಗಿ 50 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾಗೌರಿ ತಿಳಿಸಿದ್ದಾರೆ.
ಪ್ರವಾಸಿಗರ ಸೆಳೆಯಲು ಯೋಜನೆ: ಈಗಾಗಲೇ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಾಯಕಲ್ಪ ನಡೆಸಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೂ ಯೋಜನೆ ರೂಪಿಸಿದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇಲಾಖೆ ಗುಲಾಬಿ ಸ್ವಾಗತದ ಮೂಲಕ ಗಮನ ಸೆಳೆದಿತ್ತು. ಏತನ್ಮಧ್ಯೆ ಶಿವಗಂಗೆಗೆ ಪ್ರವಾಸಿಗರನ್ನು ಸೆಳೆಯಲು ಹಾಗೂ ಅವರ ಸುರಕ್ಷತೆಗಾಗಿ ಮೆಟ್ಟಿಲುಗಳ ದುರಸ್ತಿ ಜತೆಗೆ ಸುರಕ್ಷಿತ ಸ್ಟೀಲ್ ರೇಲಿಂಗ್ ಕಾಮಗಾರಿ ಆರಂಭಿಸಿದೆ.
ಕೆಆರ್‌ಐಡಿಎಲ್ ಸಂಸ್ಥೆ ಕಾಮಗಾರಿ: ಪ್ರವಾಸೋದ್ಯಮ ಇಲಾಖೆ 1 ಕೋಟಿ ರೂ. ಅಂದಾಜು ವೆಚ್ಚದ ಪೈಕಿ 50 ಲಕ್ಷ ರೂಪಾಯಿಯನ್ನು ಮೊದಲ ಕಂತಾಗಿ ಕೆಆರ್‌ಐಡಿಎಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ. 1 ಕೋಟಿ ರೂ.ಕಾಮಗಾರಿಗೆ ಅಂದಾಜುಪಟ್ಟಿ ಪಡೆದು ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಗೆ ಹಸಿರು ನಿಶಾನೆ ತೋರಿಸಲಾಗಿದೆ.
ದೇಗುಲದಿಂದ ಶಿಖರದವರೆಗೆ: ಶಿವಗಂಗೆ ಬೆಟ್ಟದ ಆರಂಭದಿಂದ ಶ್ರೀ ಗಂಗಾಧರೇಶ್ವರ ಸ್ವಾಮಿ ದೇಗುಲದವರೆಗೆ ಉತ್ತಮ ಮೆಟ್ಟಿಲು ಜತೆಗೆ ರೇಲಿಂಗ್ ವ್ಯವಸ್ಥೆ ಇದೆ. ಆದರೆ ದೇಗುಲದಿಂದ ಬೆಟ್ಟದ ಶಿಖರದವರೆಗೆ ಸಾಗಲು ಸುರಕ್ಷಿತ ಮೆಟ್ಟಿಲುಗಳಿಲ್ಲ. ಜತೆಗೆ ಹಳೇ ರೇಲಿಂಗ್ ಸುರಕ್ಷಿತಯಾಗಿಲ್ಲ. ಇದರಿಂದ ಅಪಾಯದ ನಡುವೆಯೇ ಚಾರಣಿಗರು, ಪ್ರವಾಸಿಗಳು ಶಿಖರದ ತುದಿ ತಲುಪಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸುಸಜ್ಜಿತ ಸ್ಟೀಲ್‌ರೇಲಿಂಗ್ ಜತೆಗೆ ಮೆಟ್ಟಿಲುಗಳ ಕಾಮಗಾರಿಗೆ ಚಾಲನೆ ದೊರೆತಿದೆ.
ಚಾರಣಿಗರ ೇವರಿಟ್: ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಶಿವಗಂಗೆ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರವಾಗಿ ಗಮನಸೆಳೆಯುತ್ತಿದೆ. ಸುಮಾರು 2,640 ಅಡಿ ಎತ್ತರವಿರುವ ಸುಂದರ ಪರ್ವತ ಶಿಖರವಾಗಿದೆ. ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಿಂದ 7 ಕಿ.ಮೀ. ದೂರದಲ್ಲಿದೆ. ರಾಜ್ಯ ರಾಜಧಾನಿಯಿಂದ 56 ಕಿಮೀ ದೂರದಲ್ಲಿದೆ. ಧಾರ್ಮಿಕ ಕೇಂದ್ರದ ಜತೆಗೆ ಪ್ರಮುಖ ಸಾಹಸಮಯ (ಅಡ್ವೈಂಚರ್) ತಾಣವಾಗಿದ್ದು, ಚಾರಣಿಗರ ೇವರಿಟ್ ಎನಿಸಿದೆ. ದೂರದಿಂದ ಬೆಟ್ಟ ಶಿವಲಿಂಗದ ಆಕಾರದಲ್ಲಿ ಕಾಣುವುದು ಈ ಬೆಟ್ಟದ ವಿಶೇಷಗಳಲ್ಲೊಂದಾಗಿದೆ.
ನಂದಿ ಕಲ್ಲಿನ ಕೆತ್ತನೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಶ್ರೀ ಗಂಗಾಧರೇಶ್ವರ, ಹೊನ್ನದೇವಿ ದೇವಸ್ಥಾನ, ಒಳಕಲ್ಲು ತೀರ್ಥ ನಂದಿ ಪ್ರತಿಮೆ ಪಾತಳ ಗಂಗೆ ಇವುಗಳ ಸಂಗಮದಿಂದ ಈ ಸ್ಥಳ ದಕ್ಷಿಣ ಕಾಶಿ ಎಂದು ಕರೆಯಲ್ಪಡುತ್ತದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಚುರುಕುಗೊಳಿಸಿದ್ದು, ಪ್ರವಾಸಿಗರನ್ನು ಸೆಳೆಯಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಗಂಗೆ ಬೆಟ್ಟ ಹತ್ತುವ ಪ್ರವಾಸಿಗರಿಗೆ ಸುರಕ್ಷತೆ ಕಲ್ಪಿಸುವ ಕಾರಣದಿಂದ ಸ್ಟೀಲ್ ರೇಲಿಂಗ್ ಕಾಮಗಾರಿ ಚುರುಕುಗೊಂಡಿದ್ದು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ ಶಿವಗಂಗೆ ಬೆಟ್ಟಕ್ಕೆ ಸ್ಟೀಲ್‌ರೇಲಿಂಗ್ ಅಳವಡಿಕೆ ಜತೆಗೆ ಮೆಟ್ಟಿಲುಗಳು ಹಾಗೂ ಇನ್ನಿತರ ಪ್ರವಾಸಿ ಸೌಲಭ್ಯ ಅಭಿವೃದ್ಧಿ ಕಾಮಗಾರಿಯನ್ನು 1 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. 2018-19ನೇ ಸಾಲಿನಲ್ಲಿ ಕಾಯ್ದಿರಿಸಿದ ಅನುದಾನವನ್ನು ಅನುಷ್ಠಾನ ಸಂಸ್ಥೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಮಂಗಳಾಗೌರಿ, ಸಹಾಯಕ ನಿರ್ದೇಶಕಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ