ಶಿಕ್ಷಕ, ಪಾಲಕರಿಂದ ವಿದ್ಯಾಲಯಕ್ಕೆ ಹೆಚ್ಚಿನ ಬಲ : ನಿವೃತ್ತ ಶಿಕ್ಷಕಿ ಪುಷ್ಪಾವತಿ ಬಣ್ಣನೆ

New Project (42)
Published on

ಗುರುಪುರ: ಇತ್ತೀಚೆಗೆ ವಾಮಂಜೂರು ತಿರುವೈಲಿನಲ್ಲಿ ಶತಮಾನ ಸಂಭ್ರಮ ಆಚರಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.2ರಂದು ಸಂಭ್ರಮೋಲ್ಲಾಸದಿಂದ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ನಡೆಯಿತು.

ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಸುಮಾರು 35 ಪುಟಾಣಿಗಳನ್ನು ಬ್ಯಾಂಡ್, ವಾದ್ಯಗಳ ನಾದದೊಂದಿಗೆ ಶಾಲಾ ದ್ವಾರದಿಂದ ‘ಸ್ವಾಗತ ಮೆರವಣಿಗೆ’ ಮೂಲಕ ತರಗತಿಗೆ ಕರೆತರಲಾಯಿತು. ಶಾಲಾ ಆವರಣದಲ್ಲಿ ಸೇರಿದ ಮಕ್ಕಳಿಗೆ ಗುಲಾಬಿ ಹೂವು, ಬರೆಯುವ ಪುಸ್ತಕ ಹಾಗೂ ಲೇಖನಿ ಸಾಮಗ್ರಿ ನೀಡಲಾಯಿತು. ಆಕಾಶಕ್ಕೆ ಬಣ್ಣ ಬಣ್ಣದ ಬಲೂನ್ ಹಾರಿ ಬಿಡಲಾಯಿತು.

ನಿವೃತ್ತ ಪ್ರಭಾರ ಮುಖ್ಯಶಿಕ್ಷಕಿ ಪುಷ್ಪಾವತಿ ಮಾತನಾಡಿ, ಶತಮಾನೋತ್ಸವ ಆಚರಿಸಿದ ಈ ಶಾಲೆಯ ಮಕ್ಕಳು ಊರಿಗೆ ಹೆಸರು ತರುವಂತಾಗಬೇಕು. ನಿಮ್ಮ ಓದು ಇಂದಿನಿಂದಲೇ ಆರಂಭವಾಗುತ್ತದೆ. ಶಾಲಾ ಆಡಳಿತ ವರ್ಗ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಪಾಲಕರಿಂದ ಶಾಲೆಗೆ ಹೆಚ್ಚಿನ ಬಲ ಬರುತ್ತದೆ ಎಂದರು.

ಶಾಲೆಯ ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ ಸ್ಥಾಪಕ ಸದಸ್ಯ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು ಮಾತನಾಡಿ, ನೀವು ದೇಶದ ಭವಿಷ್ಯದ ಪ್ರಜೆಗಳು. ಇಲ್ಲಿನ ಮಕ್ಕಳಿಂದ ಊರು ಮತ್ತು ದೇಶಕ್ಕೆ ಉತ್ತಮ ಸೇವೆ ಸಲ್ಲಿಸುವಂತಹ ಸಾಧನೆ ಹೊರಹೊಮ್ಮಬೇಕು. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ನಿಕಟಪೂರ್ವ ಕಾರ್ಪೋರೇಟರ್ ಹೇಮಲತಾ ಆರ್.ಸಾಲ್ಯಾನ್, ವಿದ್ಯಾಬೋಧಿನಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಘು ಸಾಲ್ಯಾನ್, ಟ್ರಸ್ಟ್‌ನ ಕಾರ್ಯದರ್ಶಿ ರಾಜು ಪೂಜಾರಿ ಕೊಳಕೆಬೈಲ್, ಟ್ರಸ್ಟಿಗಳಾದ ದಿನೇಶ್ ಜೆ.ಕರ್ಕೇರ, ಹೇಮೇಂದ್ರ, ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಷ್ಮಾ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಆಚಾರ್ಯ, ಹಳೇ ವಿದ್ಯಾರ್ಥಿ ಅನಿಲ್ ರೈ ವಾಮಂಜೂರು, ಪುರುಷೋತ್ತಮ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿ, ಕಾರ್ಯದರ್ಶಿ ಓಂ ಪ್ರಕಾಶ್ ಶೆಟ್ಟಿ ವಾಮಂಜೂರು, ಶಾಲಾ ಶತಮಾನೋತ್ಸವ ಆಚರಣೆಯ ರೂವಾರಿ ನಿವೃತ್ತ ಶಿಕ್ಷಕ ಗೋಪಾಲ ಯು, ಶಿಕ್ಷಕ ವರ್ಗ, ಶಿಕ್ಷಕೇತರ ಸಿಬ್ಬಂದಿ, ಬಿಸಿಯೂಟ ಸಿಬ್ಬಂದಿ, ಟ್ರಸ್ಟ್ ಹಾಗೂ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಪಾಲಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net