

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ 352 ಹೊಸ ಕೋವಿಡ್-19 ಪ್ರಕರಣ ವರದಿಯಾಗಿ, 363 ಮಂದಿ ಸೋಂಕಿನಿಂದ ಮುಕ್ತರಾ ಗಿದ್ದಾರೆ.
ಹೊಸ ಪ್ರಕರಣಗಳಲ್ಲಿ ಏಳು ಮೃತ್ಯು ಕೂಡ ಸೇರಿದೆ. 112 ಮಂದಿಗೆ ಕೋವಿಡ್ -19 ಲಕ್ಷಣಗಳು ಕಂಡುಬಂದರೆ, 104 ಮಂದಿಗೆ ಯಾವುದೇ ರೋಗದ ಲಕ್ಷಣಗಳಿಲ್ಲ. ಪಾಸಿಟಿವ್‌ನಲ್ಲಿ ಅತ್ಯಧಿಕ 165 ಮಂದಿ ಮಂಗಳೂರಿನವರು. 87 ಬಂಟ್ವಾಳ, 42 ಪುತ್ತೂರು, 19 ಸುಳ್ಯ, ಬೆಳ್ತಂಗಡಿ 25 ಮತ್ತು 14 ಇತರ ಜಿಲ್ಲೆಯವರು. ಒಟ್ಟು ಪ್ರಕರಣಗಳ ಸಂಖ್ಯೆ 13,065ಕ್ಕೇರಿದ್ದು ಸಕ್ರಿಯ ಪ್ರಕರಣಗಳು 2538. ಒಟ್ಟು ಕೋವಿಡ್ ಮರಣ ಸಂಖ್ಯೆ 375ಕ್ಕೇರಿದೆ.
ಕಾಸರಗೋಡಿನ 15 ಮಂದಿಗೆ ದೃಢ: ಜಿಲ್ಲೆಯ 15 ಮಂದಿ ಸಹಿತ ಕೇರಳದ 1140 ಮಂದಿಯಲ್ಲಿ ಮಂಗಳವಾರ ಕೋವಿಡ್-19 ರೋಗ ಲಕ್ಷಣ ಕಾಣಿಸಿಕೊಂಡಿದೆ. ಕಾಸರಗೋಡು ಅರಯಿ ನಿವಾಸಿ ಒಳಗೊಂಡಂತೆ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿದ್ದು, ಕೋವಿಡ್‌ಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 298ಕ್ಕೇರಿದೆ.
ಉಡುಪಿಯಲ್ಲಿ 161 ಮಂದಿಗೆ ಸೋಂಕು
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 161 ಮಂದಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಇಬ್ಬರು ಹಿರಿಯ ನಾಗರಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 99ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 11,750ಕ್ಕೆೆ ಏರಿಕೆಯಾಗಿದೆ. 250 ಮಂದಿ ಗುಣಮುಖವಾಗಿದ್ದಾರೆ. 930 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. ಇನ್ನೂ 365 ಮಂದಿಯ ವರದಿ ಬರಲು ಬಾಕಿ ಇದೆ. 2,307 ಸಕ್ರಿಯ ಪ್ರಕರಣಗಳಿವೆ.
ವಿಮಾನ ಪ್ರಯಾಣ ನಿಯಮ ಬದಲು: ವಿದೇಶಗಳಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ನಿಯಮಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯ, ಕೇಂದ್ರ ಗೃಹಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ಸೂಚನೆಯಂತೆ ಭಾರತೀಯ ನಾಗರಿಕರು ಮಂಗಳೂರಿಗೆ ಮರಳುವಾಗ ಅವರು ಏರ್ ಸುವಿಧಾ ಸ್ವ ವರದಿ ನಮೂನೆಯನ್ನು ಭರ್ತಿ ಮಾಡಬೇಕು. ಇದನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಏರುವ ಮೊದಲೇ ಮಾಡಿರಬೇಕು. ಮೊಬೈಲ್‌ಗಳಲ್ಲಿ ಆರೋಗ್ಯ ಸೇತು, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿರಬೇಕು. ಪ್ರಯಾಣಿಕರಲ್ಲಿ ಸಕ್ರಿಯವಾಗಿರುವ ಭಾರತೀಯ ಸಿಮ್ ಕಾರ್ಡ್ ಇರಬೇಕು ಎಂದು ತಿಳಿಸಲಾಗಿದೆ.
ಡಾ.ಎಂ.ಎನ್.ಆರ್ ಆಸ್ಪತ್ರೆಯಿಂದ ಬಿಡುಗಡೆ: ಕರೊನಾ ಸೋಂಕಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಒಂದು ವಾರ ವಿಶ್ರಾಂತಿಯಲ್ಲಿ ಇರಲಿದ್ದಾರೆ. ರಾಜ್ಯದ ಸರ್ವಧರ್ಮಿಯ ಸಹಕಾರಿ ಬಂಧುಗಳ ಹಾಗೂ ಮೂರುವರೆ ಲಕ್ಷ ನವೋದಯ ಸ್ವ ಸಹಾಯ ಕುಟುಂಬಗಳ ಸರ್ವ ಸದಸ್ಯರ ಪ್ರೀತಿ ವಿಶ್ವಾಸದ ಶುಭ ಹಾರೈಕೆಗಳಿಂದ ಡಾ.ಎಂ.ಎನ್. ಆರ್. ಅವರು ಆರೋಗ್ಯದಿಂದಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.