

ಮಂಗಳೂರು/ಬೆಳ್ತಂಗಡಿ/ಉಡುಪಿ: ಉಭಯ ಜಿಲ್ಲೆಗಳಲ್ಲಿ ಕೋವಿಡ್-19 ಹೊಸ ಪ್ರಕರಣಗಳು ವರದಿಯಾಗುತ್ತಿರುವುದು ಮುಂದುವರಿದಿದೆ. ಶನಿವಾರ ಉಡುಪಿಯಲ್ಲಿ 3 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಕರೊನಾ ಪಾಸಿಟಿವ್ ಪತ್ತೆಯಾಗಿದೆ.
ಮುಂಬೈನಿಂದ ಮೇ 9ರಂದು ಉಡುಪಿಗೆ ಬಂದಿದ್ದ 34 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಬೈಂದೂರು ತಾಲೂಕಿನ ನಿವಾಸಿ ಮಹಿಳೆ ಕುಂದಾಪುರದಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಮಹಿಳೆಗೆ 11 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಎಲ್ಲರನ್ನೂ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
40 ಮತ್ತು 49 ವರ್ಷದ ಪುರುಷರಿಬ್ಬರಿಗೆ ಪಾಸಿಟಿವ್ ಕಂಡು ಬಂದಿದ್ದು, ಅವರಿಗೆ ಯಾವ ಮೂಲದಿಂದ ಸೋಂಕು ಬಂದಿದೆ ಎಂಬುದು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ 53ಕ್ಕೆ ಏರಿಕೆಯಾಗಿದೆ.
ದ.ಕ. ಮತ್ತೆರಡು ಕರೊನಾ
ಜ್ವರದಿಂದ ಬಳಲುತ್ತಿದ್ದ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ನಿವಾಸಿ 41 ವರ್ಷದ ಮಹಿಳೆ ಮತ್ತು ಮಹಾರಾಷ್ಟ್ರದಿಂದ ಮಂಗಳೂರಿಗೆ ಬಂದು ಕ್ವಾರಂಟೈನ್‌ನಲ್ಲಿದ್ದ 30 ವರ್ಷದ ಯುವಕ ದ.ಕ. ಜಿಲ್ಲೆಯ ಇಬ್ಬರು ಸೋಂಕಿತರು. ಯುವಕ ಖಾಸಗಿ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಇಬ್ಬರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಸಿರಾಟದ ಸಮಸ್ಯೆ ಇರುವುದನ್ನು ಗಮನಿಸಿದ ಗ್ರಾಮಸ್ಥರ ಒತ್ತಾಯದ ಕಾರಣದಿಂದ ಮಹಿಳೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಆಗ ಸೋಂಕು ದೃಢಪಟ್ಟಿದೆ. ಮಹಿಳೆ ವಾಸವಾಗಿದ್ದ ಶಿರ್ಲಾಲಿನ ಮಜಲುಪಲ್ಕೆ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಗುರುತಿಸಲಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಇದರ ವ್ಯಾಪ್ತಿಯಲ್ಲಿ 18 ಮನೆಗಳಿವೆ.
ಮಹಿಳೆ ಮಜಲುಪಲ್ಕೆಯಿಂದ ಕನ್ಯಾಡಿ-1 ಪಡ್ಪು ಎಂಬಲ್ಲಿಗೆ ಸಂಬಂಧಿಕರ ಮನೆಗೆ ತೆರಳಿದ್ದು, ಆಗ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈಗ ಆ ಮನೆಯ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮಹಿಳೆ ಎಲ್ಲೆಲ್ಲ ಹೋಗಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಹಾಲು ಖರೀದಿ ಸ್ಥಗಿತ: ಮಹಿಳೆ ಸ್ಥಳೀಯ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿದಿನ ಹಾಲು ಕೊಂಡೊಯ್ಯುತ್ತಿದ್ದರು. ಮುಂದಿನ ಎಂಟು ದಿನ ಹಾಲು ಖರೀದಿಸದಿರಲು ತೀರ್ಮಾನಿಸಲಾಗಿದೆ.
ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಆರೋಗ್ಯಾಧಿಕಾರಿ ಡಾ.ಕಲಾಮಧು, ಅಳದಂಗಡಿ ಆಸ್ಪತ್ರೆ ವೈದ್ಯೆ ಡಾ.ಚೈತ್ರಾ, ವೇಣೂರು ಎಸ್‌ಐ ಲೋಲಾಕ್ಷ, ಎಎಸ್‌ಐ ಜಯ ಪೂಜಾರಿ, ಪೊಲೀಸ್ ಸಿಬ್ಬಂದಿ ಕೃಷ್ಣ, ತಾಪಂ ಸದಸ್ಯೆ ಜಯಶೀಲಾ, ಪಿಡಿಒ ರಾಜು, ಗಣಪತಿ, ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ಮದುವೆ ರದ್ದು: ಶಿರ್ಲಾಲು ಪ್ರದೇಶವನ್ನು ಸೀಲ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಮದುವೆಯೊಂದು ಮುಂದೂಡಲ್ಪಟ್ಟಿದೆ. ಸ್ಥಳೀಯ ಯುವತಿಗೆ ಬಳಂಜದ ಯುವಕನೊಂದಿಗೆ ಮೇ 24ರಂದು ಸರಳ ಮದುವೆಗೆ ಸಿದ್ಧತೆ ನಡೆದಿತ್ತು.
ಒಟ್ಟು ಪ್ರಕರಣ 65ಕ್ಕೇರಿಕೆ: ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದ್ದು, ಕಲಬುರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ತಲಾ ಒಬ್ಬರು ಸೇರಿ 33 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 30 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ತೊಂದರೆ ಹಾಗೂ ಕಾಲಿನ ಸೋಂಕಿನಿಂದ ಬಳಲುತ್ತಿರುವ 76 ವರ್ಷದ ವೃದ್ಧ(ರೋಗಿ 1008), ಶ್ವಾಸಕೋಶದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತದ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 68 ವರ್ಷದ ವೃದ್ಧೆ (ರೋಗಿ 1009) ಮತ್ತು ಮೂತ್ರಸೋಂಕು, ಉಸಿರಾಟದ ತೊಂದರೆ ಮತ್ತು ಮಧುಮೇಹದಿಂದ ಬಳಲುತ್ತಿರುವ 40 ವರ್ಷದ ಮಹಿಳೆ (ರೋಗಿ 1437)ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಶನಿವಾರ 248 ಮಂದಿಯ ಗಂಟಲ ಮಾದರಿಯನ್ನು ವರದಿ ಬಂದಿದ್ದು, ಇದರಲ್ಲಿ 246 ನೆಗೆಟಿವ್ ಬಂದಿದೆ. ಮತ್ತೆ 252 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 584 ಮಾದರಿಗಳ ವರದಿ ಬರಲು ಬಾಕಿ ಇದೆ.
ಉಡುಪಿ 339 ನೆಗೆಟಿವ್: ಉಡುಪಿ ಜಿಲ್ಲೆಯಲ್ಲಿ ಶನಿವಾರ 339 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 10, ಇಲ್‌ನೆಸ್‌ಗೆ ಸಂಬಂಧಿಸಿ 10, ಕೋವಿಡ್-19 ಸಂಪರ್ಕ 18, ಹಾಟ್‌ಸ್ಪಾಟ್‌ನಿಂದ ಬಂದವರು 823 ಮಂದಿ ಸೇರಿದಂತೆ ಒಟ್ಟು 856 ಮಂದಿಯ ಮಾದರಿಯನ್ನು ಶನಿವಾರ ಸಂಗ್ರಹಿಸಲಾಗಿದೆ. ಇನ್ನೂ 2925 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಹೊರತಾದ ಸಾವು: ಮುಂಬೈನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಮೂಡುಬಿದಿರೆಯ ಕಡಂದಲೆ ನಿವಾಸಿ 55 ವರ್ಷದ ವ್ಯಕ್ತಿ ಮೇ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಅವರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಸಾವು ಕೋವಿಡ್‌ನಿಂದ ಸಂಭವಿಸಿಲ್ಲ, ಹಾಗಾಗಿ ಇದನ್ನು ನಾನ್ ಕೋವಿಡ್ ಡೆತ್ ಎಂದು ಆರೋಗ್ಯ ಇಲಾಖೆ ಪರಿಗಣಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಹಾರಾಷ್ಟ್ರದಿಂದ 5 ಸೋಂಕು: ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾದ ಐದು ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರ ಮೂಲವನ್ನು ಹೊಂದಿವೆ. ಮೇ 17ರಂದು ಸೋಂಕು ದೃಢಗೊಂಡ ಮಂಗಳೂರಿನ ಯೆಯ್ಯಡಿ ಮೂಲದ 35 ವರ್ಷದ ಮಹಿಳೆ, 18ರಂದು ವಿಟ್ಲದ ಕರೋಪಾಡಿಯ 30 ವರ್ಷದ ಯುವಕ, 21ರಂದು ಆತ್ಮಹತ್ಯೆ ಮಾಡಿಕೊಂಡಿರುವ ಕಡಂದಲೆ ನಿವಾಸಿ, 22ರಂದು ಬೆಳ್ತಂಗಡಿಯ ಆರಂಬೋಡಿ ಯುವತಿ ಹಾಗೂ 23ರಂದು ಸೋಂಕು ಪತ್ತೆಯಾದ 30 ವರ್ಷದ ಯುವಕ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಕಾಸರಗೋಡಲ್ಲಿ ನಾಲ್ವರಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ನಾಲ್ವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಕೊಲ್ಲಿ ರಾಷ್ಟ್ರದಿಂದ ಬಂದಿದ್ದ ಕೋಡೋಂ ಬೇಳೂರು ನಿವಾಸಿಗಳಿಬ್ಬರು, ದುಬೈನಿಂದ ಬಂದಿದ್ದ ಮಂಗಲ್ಪಾಡಿಯ ನಿವಾಸಿ, ಮಹಾರಾಷ್ಟ್ರದಿಂದ ಬಂದಿದ್ದ ಪೈವಳಿಕೆ ನಿವಾಸಿಗಳು ಸೋಂಕಿತರು. ಶನಿವಾರ ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ.