

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಹಾರಾಷ್ಟ್ರದ ಕರೊನಾ ಬಾಧೆ ತಗಲಿದೆ. ಒಂದೇ ದಿನ 24 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 23 ಮಂದಿ ಮುಂಬೈಯಿಂದ, ಒಬ್ಬರು ಕೇರಳದಿಂದ ಮರಳಿದ್ದು ಮನೆ ಅಥವಾ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರು. ಪಾಸಿಟಿವ್ ಪತ್ತೆಯಾದ 10 ಮಂದಿಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಆರಂಭಿಸಲಾಗಿದೆ. 14 ಮಂದಿಗೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
ಈ ಮೂಲಕ ಒಂದೇ ದಿನ ಅತ್ಯಧಿಕ ಕರೊನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಂತಾಗಿದೆ. ಈ ಮೊದಲು ದುಬೈನಿಂದ ವಿಮಾನ ಆಗಮಿಸಿದ ಎರಡು ದಿನಗಳಲ್ಲಿ 16 ಪ್ರಕರಣ ದಾಖಲಾಗಿದ್ದು ಅತಿ ಹೆಚ್ಚು ಎನಿಸಿತ್ತು. ಗುರುವಾರದ ವರದಿಯಂತೆ 2 ವರ್ಷದ ಗಂಡು ಮಗುವೂ ಪಾಸಿಟಿವ್ ಪಟ್ಟಿಯಲ್ಲಿದೆ. 17 ಗಂಡಸರು ಹಾಗೂ 6 ಮಹಿಳೆಯರಿಗೆ ಕರೊನಾ ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಕರೊನಾ ಬಾಧಿತರ ಸಂಖ್ಯೆ 105ಕ್ಕೇರಿಕೆಯಾಗಿದೆ.
10 ಮಂದಿ ಬಿಡುಗಡೆ: ಕೋವಿಡ್-19 ಸೋಂಕಿತರಾಗಿ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ವರ್ಷದ ಗಂಡು ಮಗು, 4 ಮಹಿಳೆಯರು ಮತ್ತು ಐವರು ಪುರುಷರು ಗುಣಮುಖರಾಗಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಪೈಕಿ 68 ವರ್ಷದ ಸುರತ್ಕಲ್‌ನ ಮಹಿಳೆ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೇ 15ರಂದು ಇವರನ್ನು ನಗರದ ಖಾಸಗಿ ಆಸ್ಪತ್ರೆಯಿಂದ ವೆನ್ಲಾಕ್‌ಗೆ ಸ್ಥಳಾಂತರಿಸಲಾಗಿತ್ತು. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದು ಉಸಿರಾಟದ ತೊಂದರೆಯಿಂದ ಗುಣಮುಖರಾಗಿದ್ದಾರೆ. ಗುರುವಾರ ಸ್ವೀಕೃತವಾದ ಗಂಟಲು ದ್ರವ ವರದಿಯಲ್ಲಿ ಕರೊನಾ ಸೋಂಕು ಮುಕ್ತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 39 ಮಂದಿ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮುಂಬೈನಿಂದ ಬಂದವರೇ ಅಧಿಕ
ಇದುವರೆಗಿನ ಮಾಹಿತಿಯಂತೆ ದುಬೈನಿಂದ ಬಂದವರಲ್ಲಿ 24 ಮಂದಿಗೆ ಹಾಗೂ ಮಹಾರಾಷ್ಟ್ರದಿಂದ ಮರಳಿರುವ 42 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿದ್ದು ಜಿಲ್ಲೆಯ ಒಟ್ಟು ಸೋಂಕಿತರಲ್ಲಿ ಶೇ.70ರಷ್ಟು ಇವರೇ ಆಗಿದ್ದಾರೆ. ಮೇ 17ರಂದು ಮುಂಬೈನಿಂದ ಆಗಮಿಸಿದ ಒಂದೇ ಕುಟುಂಬದ ಇಬ್ಬರು ಗಂಡಸರು, ಮೇ 18ರಂದು ಆಗಮಿಸಿದ ಮಹಿಳೆ ಮತ್ತು ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೇ 20ರಂದು ಮುಂಬೈಯಿಂದ ಒಂದೇ ಬಸ್‌ನಲ್ಲಿ ಆಗಮಿಸಿದ ಐವರು ಗಂಡಸರಿಗೆ ಸೋಂಕು ಇರುವುದು ದೃಢ ಪಟ್ಟಿದೆ.
ಗುರುವಾರ ಒಟ್ಟು 133 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. 58 ಸ್ಯಾಂಪಲ್ ಕಳುಹಿಸಲಾಗಿದ್ದು, ಲಭ್ಯವಾದ 113 ಸ್ಯಾಂಪಲ್ ಟೆಸ್ಟ್ ವರದಿಯಲ್ಲಿ 24 ಪಾಸಿಟಿವ್, 89 ನೆಗೆಟಿವ್. ಇನ್ನೂ 1004 ಸ್ಯಾಂಪಲ್ ವರದಿ ಬರಲು ಬಾಕಿ ಇದೆ. ಗುರುವಾರ ಉಸಿರಾಟದ ತೊಂದರೆ ಇರುವ 5 ಪ್ರಕರಣ ಪತ್ತೆಯಾಗಿದೆ. 43 ಮಂದಿಯನ್ನು ತೀವ್ರ ನಿಗಾ ವಹಿಸಲು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗರ್ಭಿಣಿ ಸೇರಿ ಮೂವರಿಗೆ ಸೋಂಕು
ಸುರತ್ಕಲ್: ಮುಂಬೈನಿಂದ ಬಂದು ಮೇ 14ರಿಂದ ಕಾಟಿಪಳ್ಳದಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ, ಅವರ ತಾಯಿ ಹಾಗೂ ತಂದೆಗೆ ಗುರುವಾರ ಕರೋನಾ ಸೋಂಕು ದೃಢಪಟ್ಟಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಭಿಣಿಯನ್ನು ಕರೆತರಲು ತಂದೆ, ತಾಯಿ ಮುಂಬೈಗೆ ಹೋಗಿದ್ದರೆನ್ನಲಾಗಿದೆ. ಮನೆಯಲ್ಲಿದ್ದ ಇನ್ನೋರ್ವ ಬಾಲಕಿಯ ತಪಾಸಣಾ ವರದಿ ಶುಕ್ರವಾರ ಲಭ್ಯವಾಗಲಿದೆ. ಸೋಂಕು ದೃಢಪಟ್ಟ ಮೂವರೂ ಹೋಮ್ ಕ್ವಾರಂಟೈನ್‌ನಲ್ಲಿದ್ದ ಕಾರಣ ಸೀಲ್‌ಡೌನ್ ಅಗತ್ಯವಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ.
ಮೂಳೂರು ಬರ್ಕೆ ಸೀಲ್‌ಡೌನ್
ಗುರುಪುರ ಹೋಬಳಿಯ ಮೂಳೂರು ಗ್ರಾಮದಲ್ಲಿ ವ್ಯಕ್ತಿಯೋರ್ವರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ವಾಸವಿದ್ದ ಬರ್ಕೆ ಪ್ರದೇಶವನ್ನು ಸೀಲ್‌ಡೌನ್ ಮಾಡಿ ಜಿಲ್ಲಾಡಳಿತ ಗುರುವಾರ ಆದೇಶ ಹೊರಡಿಸಿದೆ. 23 ವರ್ಷದ ವ್ಯಕ್ತಿ ಮುಂಬೈಯಿಂದ ಮೇ 18ರಂದು ಆಗಮಿಸಿದ್ದರು. ಪೂರ್ವದಲ್ಲಿ 20/4 ಸರ್ವೇ ನಂಬರ್‌ನ ಖಾಲಿ ಜಾಗ, ಪಶ್ಚಿಮದಲ್ಲಿ 20/4 ಸರ್ವೇ ನಂಬರ್‌ನ ಖಾಲಿ ಜಾಗ, ಉತ್ತರದಲ್ಲಿ 20/4 ಸರ್ವೇ ನಂಬರ್‌ನ ಖಾಲಿ ಜಾಗ, ದಕ್ಷಿಣದಲ್ಲಿ 20/4 ಸರ್ವೇ ನಂಬರ್‌ನ ಖಾಲಿ ಜಾಗ ಕಂಟೇನ್ಮೆಂಟ್ ವ್ಯಾಪ್ತಿಯಾಗಿರುತ್ತದೆ. ಪೂರ್ವದಲ್ಲಿ ಗುರುಪುರ ನದಿ, ಪಶ್ಚಿಮದಲ್ಲಿ ಕಂದಾವರ ಗ್ರಾಮ, ಉತ್ತರದಲ್ಲಿ ಅಡ್ಡೂರು ಗ್ರಾಮ, ದಕ್ಷಿಣದಲ್ಲಿ ತೆಂಕ ಉಳುಪಾಡಿ ಗ್ರಾಮ ಸ್ಟೇಷನ್ ಬಫರ್ ಜೋನ್‌ನಲ್ಲಿರುತ್ತದೆ.
ಕಾಸರಗೋಡಿನಲ್ಲಿ 18 ಪಾಸಿಟಿವ್
ಕಾಸರಗೋಡು: ಜಿಲ್ಲೆಯಲ್ಲಿ 18 ಮಂದಿಯಲ್ಲಿ ಕೋವಿಡ್-19 ವೈರಸ್ ಕಾಣಿಸಿಕೊಂಡಿದೆ. ಇದರೊಂದಿಗೆ ಕೇರಳದಲ್ಲಿ ಗುರುವಾರ ಒಂದೇ ದಿನ 84 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1,088ಕ್ಕೆ ಏರಿಕೆಯಾಗಿದ್ದು, 526 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡಿನಲ್ಲಿ ಗುರುವಾರ ಸೋಂಕು ಪತ್ತೆಯಾದ 18ರಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಹಾಗೂ ಒಬ್ಬ ತಮಿಳುನಾಡಿನಿಂದ ಆಗಮಿಸಿದವರು. ಉಳಿದ ನಾಲ್ಕು ಮಂದಿ ವಿದೇಶದಿಂದ ಆಗಮಿಸಿದವರು. ಈ ಮೂಲಕ ಕಾಸರಗೋಡಿನಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿರವವರ ಸಂಖ್ಯೆ 67ಕ್ಕೇರಿಕೆಯಾಗಿದೆ.