

ಬಂಟ್ವಾಳ: ರೋಗ ಬಂದ ಬಳಿಕ ಚಿಕಿತ್ಸೆ ನೀಡುವ ಬದಲು ಬರುವ ಮೊದಲೇ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಹಾಗೂ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಕಾರ್ಯೋನ್ಮುಖವಾಗಿರುವುದು ಅಭಿನಂದನೀಯ ಎಂದು ರೋಟರಿ ಕ್ಲಬ್‌ನ ಜಿಲ್ಲಾ ಮಾಜಿ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ ಹೇಳಿದರು.
ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ ಸಂಸ್ಥೆ 20 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಐದು ದಿನ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿರುವ ವಿಂಶತಿ ಸಂಭ್ರಮ 2023-24 ಹಾಗೂ ವರ್ತಕ ಗ್ರಾಹಕರ ಮಹಾಸಮಾಗಮ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಂಯೋಜನೆಯಲ್ಲಿ ನಡೆದ ಆರೋಗ್ಯ ತಪಾಸಣೆ ಹಾಗೂ ದಿವ್ಯಾಂಗರ ಸಮಸ್ಯೆಗಳು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿಸುಗಳ ಮಹಾಮೇಳ ಉದ್ಘಾಟಿಸಿದರು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ. ಬ್ಯಾಂಕ್‌ಗಳ ತವರೂರು. ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆಗೆ ಅನೇಕ ಸಹಕಾರಿ ಸಂಘಗಳು ಸ್ಥಾಪನೆಗೊಂಡು ಗ್ರಾಹಕರಿಗೆ ಸೇವೆ ನೀಡುತ್ತಿವೆ. ಸಹಕಾರಿ ಸಂಘಗಳು ಗ್ರಾಹಕರಿಗೆ ಹೆಚ್ಚು ಹತ್ತಿರವಾಗಿದ್ದು, ವಿಶ್ವಾಸ ಹಾಗೂ ಮಾನವೀಯ ನೆಲೆಯಲ್ಲಿ ಜನರಿಗೆ ಆರ್ಥಿಕ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಬಿ.ಸಿ.ರೋಡ್‌ನ ವಿಕಾಸಂ ಸೇವಾ ಫೌಂಡೇಷನ್‌ನ ನಿರ್ದೇಶಕ ಗಣೇಶ್ ಭಟ್ ವಾರಣಾಸಿ, ದಿವ್ಯಾಂಗರ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮದ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು, ರೋಟರಿ ಕ್ಲಬ್‌ನ ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ಸಂಘದ ನಿರ್ದೇಶಕ ನಾರಾಯಣ ಸಿ.ಪೆರ್ನೆ ಸ್ವಾಗತಿಸಿದರು. ನಿರ್ದೇಶಕ ಡಾ.ಸುದೀಪ್ ಕುಮಾರ್ ಜೈನ್ ವಂದಿಸಿದರು. ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರೋಟರಿ ಕ್ಲಬ್ ಬಂಟ್ವಾಳ ಸಂಯೋಜನೆಯಲ್ಲಿ ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆರೋಗ್ಯ ತಪಾಸಣೆ ನಡೆಯಿತು.
ರೋಗಕ್ಕೆ ಔಷಧವಿದೆ. ವೈಕಲ್ಯಕ್ಕೆ ಔಷಧವಿಲ್ಲ. ವೈಕಲ್ಯ ಇರುವವರಿಗೆ ಔಷಧದ ಬದಲು ತರಬೇತಿ ನೀಡಬೇಕಾಗಿದೆ. ದೇಶದಲ್ಲಿ ಶೇ.80ರಷ್ಟು ಅಂಗವಿಕಲರು ನಿರುದ್ಯೋಗಿಗಳಾಗಿದ್ದು ಅವರಿಗೆ ಉನ್ನತ ವಿದ್ಯಾಭ್ಯಾಸ, ಉದ್ಯೋಗ ಒದಗಿಸುವುದು ಸವಾಲು. ಗಣೇಶ್ ಭಟ್ ವಾರಣಾಸಿ, ವಿಕಾಸಂ ಸೇವಾ ಫೌಂಡೇಷನ್‌ನ ನಿರ್ದೇಶಕ
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿ, ಸಂಘ ಹಾಗೂ ಗ್ರಾಹಕರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಸಂಘದ ವಿಂಶತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಪ್ರಯುಕ್ತ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು, ಗೃಹೋಪಯೋಗಿ ವಸ್ತುಗಳ ಮಾರಾಟ, ತಿಂಡಿ-ತಿನಿಸುಗಳ ಮಹಾಮೇಳ ನಡೆಯುತ್ತಿದೆ. 2023ರ ಡಿಸೆಂಬರ್‌ನಲ್ಲಿ ಒಡಿಯೂರು ಶ್ರೀಗಳಿಂದ ವಿಂಶತಿ ಸಂಭ್ರಮ ಉದ್ಘಾಟನೆಗೊಂಡಿದ್ದು, 13 ಶಾಖೆಗಳಲ್ಲಿ ಗ್ರಾಹಕ ಸಮಾವೇಶ ಹಮ್ಮಿಕೊಂಡು ಬರಲಾಗಿದೆ. ಈಗಾಗಲೇ ಸಂಘ ಜಿಲ್ಲಾಮಟ್ಟಕ್ಕೆ ವಿಸ್ತರಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಮಂಗಳೂರು ಹಾಗೂ ಪುತ್ತೂರು ತಾಲೂಕುಗಳಲ್ಲಿ ಶಾಖೆ ತೆರೆಯಲಾಗುವುದು ಎಂದು ತಿಳಿಸಿದರು.