ದ.ಕ.ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಸುಬ್ರಹ್ಮಣ್ಯ ಬಳಿ ಕೈಕಂಬ ಸೇತುವೆ ಮುಳುಗಡೆ

SUB-OCT-08-14
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಹಗಲು ಉತ್ತಮ ಬಿಸಿಲು ಕಂಡುಬಂದಿದ್ದರೂ, ಸಂಜೆ ಬಳಿಕ ಅಲ್ಲಲ್ಲಿ ಮಳೆಯಾಗಿದೆ.


ಮಂಗಳೂರು, ಉಳ್ಳಾಲ ಸುತ್ತಮುತ್ತ ಸಂಜೆ ಮಳೆಯಾಗಿದ್ದು, ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ ಸೇರಿದಂತೆ ಹಲವಡೆ ಗುಡುಗು ಸಹಿತ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇನ್ನೂ ಕೆಲವು ದಿನ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಭಾನುವಾರ ಬೆಳಗ್ಗಿನವರೆಗೆ ಮಂಗಳೂರಲ್ಲಿ 0.8 ಮಿ.ಮೀ, ಬಂಟ್ವಾಳ 1.1, ಬೆಳ್ತಂಗಡಿ 2.7, ಪುತ್ತೂರು 1.6, ಕಡಬ 3.6, ಸುಳ್ಯ 4.8 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 3.1 ಮಿ.ಮೀ.ಆಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ ಬಿಸಿಲಿನ ವಾತಾವರಣವಿತ್ತು. ಕಳೆದ 24 ಗಂಟೆಯಲ್ಲಿ 26.1 ಮಿ.ಮೀ.ಮಳೆಯಾಗಿದೆ.


ಭಾನುವಾರ ಸಂಜೆ ವೇಳೆಗೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಮಳೆಗೆ ಇಲ್ಲಿಗೆ ಸಮೀಪದ ಕೈಕಂಬ ಎಂಬಲ್ಲಿ ಕೋಟೆಸಾರು ಹೊಳೆಗೆ ನಿರ್ಮಿಸಿದ ಸೇತುವೆ ಮುಳುಗಡೆಗೊಂಡಿತು. ಸಂಜೆ ವೇಳೆಗೆ ಗುಡುಗು ಮಿಂಚಿನ ಭಾರಿ ಮಳೆ ಸುರಿದು, ಅರ್ಧ ತಾಸು ಮಳೆಗೆ ಕೈಕಂಬದ ಬಳಿ ಹರಿಯುವ ಕೋಟೆಸಾರು ಹೊಳೆ ತುಂಬಿ ಹರಿಯಿತು. ಇದರಿಂದಾಗಿ ಸುಬ್ರಹ್ಮಣ್ಯ- ಉಪ್ಪಿನಂಗಡಿ- ಮಂಗಳೂರು ರಸ್ತೆಗೆ ನಿರ್ಮಿಸಲಾದ ಕೋಟೆಸಾರು ಸೇತುವೆ ಮುಳುಗಡೆಗೊಂಡಿತು. ರಸ್ತೆ ಸಂಚಾರ ಬಂದ್ ಆದ ಪರಿಣಾಮ ಸೇತುವೆಯ ಇಕ್ಕೆಲಗಳಲ್ಲಿ ವಾಹನ ಸಾಲುಗಟ್ಟಿ ನಿಂತವು. ಮಳೆ ಕಡಿಮೆಯಾದ ಬಳಿಕ ಪ್ರವಾಹ ಕಡಿಮೆಯಾಗಿ ಸಂಚಾರ ಸುಗಮಗೊಂಡಿತು. ಭಾನುವಾರ ಸಂಜೆ ಸುಬ್ರಹ್ಮಣ್ಯ, ನೆಟ್ಟಣ, ಬಿಳಿನೆಲೆ, ಕೈಕಂಬ, ಕುಲ್ಕುಂದ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಗುತ್ತಿಗಾರು, ಪಂಜ, ಯೇನೆಕಲ್ಲು, ಬಳ್ಪ, ಬೀದಿಗುಡ್ಡೆ, ಕರಿಕ್ಕಳ, ನಿಂತಿಕಲ್ಲು ಪ್ರದೇಶದಲ್ಲಿ ಮಳೆಯಾಗಿದೆ. ಶನಿವಾರದಿಂದ ಸಂಜೆಯ ವೇಳೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭವಾಗಿ, ಭಾನು ವಾರವೂ ಮುಂದುವರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net