

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಮತ್ತು 7ನೇ ತರಗತಿ ಭೌತಿಕ ತರಗತಿ ಸೋಮವಾರದಿಂದ ಆರಂಭವಾಗಿದೆ. ಹೈಸ್ಕೂಲ್ ತರಗತಿಗಳು ಶುಕ್ರವಾರದಿಂದಲೇ ಆರಂಭವಾಗಿದ್ದು, ಎರಡನೇ ಹಂತದಲ್ಲಿ ಹಿರಿಯ ಪ್ರಾಥಮಿಕ ತರಗತಿಗಳೂ ಶುರುವಾಗಿದೆ. ಇದರೊಂದಿಗೆ 6ನೇ ತರಗತಿಯಿಂದ ಪದವಿ, ಸ್ನಾತಕ್ಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳೂ ಆರಂಭಗೊಂಡಂತಾಗಿದೆ.
ಈ ಮೊದಲ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜನವರಿಯಿಂದ ಮಾರ್ಚ್ ತಿಂಗಳ ವರೆಗೆ ತರಗತಿ ನಡೆದಿತ್ತು. ಆ ಬಳಿಕ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ತರಗತಿಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆ ಗೊಳಿಸಿ, ರಜೆ ಘೋಷಿಸಲಾಗಿತ್ತು. ಜೂನ್‌ನಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿ ಆರಂಭಿಸಲಾಗಿತ್ತು.
ಇದೀಗ ಭೌತಿಕ ತರಗತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಮನೆಯಿಂದಲೇ ಬಿಸಿನೀರು ತರುವಂತೆ ಸೂಚಿಸಲಾಗಿತ್ತು.
ಕೆಲವು ಶಾಲೆಗಳಲ್ಲಿ ಶಿಕ್ಷಕರು ರಂಗೋಲಿ ಬಿಡಿಸಿ, ಗುಲಾಬಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಥರ್ಮಲ್ ಸ್ಕ್ಯಾನಿಂಗ್ ಮಾಡಿ ತರಗತಿ ಬಿಡಲಾಯಿತು. ಪ್ರತಿ ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಯಿತು. ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ತರಗತಿಗಳು ನಡೆಯಿತು. ಮೊದಲ ದಿನ ವಿದ್ಯಾರ್ಥಿಗಳ ಸಂಖ್ಯೆ ತುಸು ಕಡಿಮೆಯಿತ್ತು. ಕೆಲವು ಖಾಸಗಿ ಶಾಲೆಗಳು ಇನ್ನಷ್ಠ ಆರಂಭವಾಗಬೇಕಿದ್ದು, ಆನ್‌ಲೈನ್ ತರಗತಿ ಮುಂದುವರಿಸಿವೆ.