

ಪಿ.ಬಿ.ಹರೀಶ್ ರೈ ಮಂಗಳೂರು
ದ.ಕ. ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡುವ ಆತಂಕ ಕೊಂಚ ಕಡಿಮೆಯಾಗಿದೆ.
ಸಮುದಾಯಕ್ಕೆ ಸೋಂಕು ಹರಡದಂತೆ ಜಿಲ್ಲಾಡಳಿತ ಲಾಕ್‌ಡೌನ್ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ರಾಜ್ಯ ಸರ್ಕಾರ ಕೂಡ ಸಕಾಲದಲ್ಲಿ ಸ್ಪಂದಿಸಿದೆ. ವೆನ್ಲಾಕ್ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವುದರ ಜತೆಗೆ ವೈರಾಲಜಿ ಲ್ಯಾಬ್ ಮಂಜೂರು ಮಾಡಿದ್ದು, ಇದಕ್ಕೆ ನಿದರ್ಶನ. ಜಿಲ್ಲೆಯಲ್ಲಿ ಪತ್ತೆಯಾದ 12 ಕರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರೂ ಚೇತರಿಸಿಕೊಳ್ಳುತ್ತಿದ್ದಾರೆ.
ದ.ಕ ಜಿಲ್ಲೆ ಸದ್ಯ ಸುರಕ್ಷಿತವಾಗಿರುವ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಹೇಗೆ ಸಾಧ್ಯವಾಯಿತು?
- ಸಂಘಟಿತ ಪ್ರಯತ್ನ ಕಾರಣ. ಮಂಗಳೂರು ಸಮೀಪ ವಿಮಾನ ನಿಲ್ದಾಣ ಇರುವ ಕಾರಣ ಕರೊನಾ ಸೋಂಕು ಹರಡುವ ಬಗ್ಗೆ ಸಾಕಷ್ಟು ಮುಂಚಿತವಾಗಿಯೇ ಎಚ್ಚರ ವಹಿಸಲಾಗಿತ್ತು. ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ಆತನ ಪ್ರಯಾಣದ ಪೂರ್ಣ ಮಾಹಿತಿ ಸಂಗ್ರಹಿಸಿ ಶಂಕಿತರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜನತೆ ತಾವಾಗಿಯೇ ಮುನ್ನೆಚ್ಚರಿಕೆ ವಹಿಸಿದ್ದೂ ಜಿಲ್ಲಾಡಳಿತಕ್ಕೆ ನೆರವಾಯಿತು.
ಲಾಕ್‌ಡೌನ್ ಅವಧಿಯಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು ಎನ್ನುವ ಆರೋಪವಿದೆ?
ವಿಶ್ವದೆಲ್ಲೆಡೆ ಮೊದಲ ಬಾರಿಗೆ ಇಂತಹ ವಿಪತ್ತು ಎದುರಾಗಿದೆ. ಇದನ್ನು ನಿಯಂತ್ರಿಸುವುದು ಹೇಗೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಸಾಮಾಜಿಕ ಅಂತರ ಕಾಯುವುದೇ ಇದಕ್ಕೆ ಪರಿಹಾರ. ಹಾಗಾಗಿ ಕೆಲವು ಪ್ರಯೋಗ ಮಾಡುವುದು ಅನಿವಾರ್ಯವಾಗಿತ್ತು. ಸೋಂಕು ಹರಡದಂತೆ ತಡೆಯಲು ಪ್ರಥಮ ಆದ್ಯತೆ ನೀಡಿದ ಕಾರಣ ಆರಂಭದ ಒಂದೆರಡು ದಿನ ಜನರಿಗೆ ತೊಂದರೆಯಾಗಿರಬಹುದು. ಜಿಲ್ಲೆಯ ಸುರಕ್ಷತೆಗಾಗಿ ಕೆಲವು ಕಟ್ಟುನಿಟ್ಟಿನ ಕೈಗೊಳ್ಳಲೇಬೇಕಿತ್ತು.
ಪರಿಸ್ಥಿತಿ ನಿಯಂತ್ರಿಸಲು ವಿವಿಧ ಇಲಾಖೆಗಳ ಜತೆ ಹೊಂದಾಣಿಕೆ ನಡೆಸಿದ್ದು ಹೇಗೆ?
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಜವಾಬ್ದಾರಿ ಹಂಚಿದ್ದೆವು. ಪೊಲೀಸರು, ಆಶಾ ಕಾರ್ಯಕರ್ತೆಯರು, ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ ಸಹಿತ ಎಲ್ಲ ಇಲಾಖೆಯವರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್, ನಗರ ಸ್ಥಳೀಯಾಡಳಿತ ಸಂಸ್ಥೆಯ ವ್ಯಾಪ್ತಿಯಲ್ಲಿ ಸಂಚಾರಿ ದಳ ರಚಿಸಿ ನಿಗಾ ವಹಿಸಿದ್ದೆವು. ಸಂಚಾರ ನಿಯಂತ್ರಣ ಹಾಗೂ ದಿನಸಿ ಖರೀದಿ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸರು ಅಪಾರ ಶ್ರಮ ವಹಿಸಿದ್ದರು.
ಜನಪ್ರತಿನಿಧಿಗಳ ಸಹಕಾರ ಹೇಗಿತ್ತು?
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಪೂರ್ಣ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನತೆಗೆ ನೆರವಾಗಿದ್ದಾರೆ. ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿದ ಕಾರಣ ಮಾರ್ಕೆಟ್‌ನಲ್ಲಿ ಉಂಟಾಗುತ್ತಿದ್ದ ಜನಜಂಗುಳಿ ನಿಯಂತ್ರಣವಾಗಿದೆ. ಎಲ್ಲ ರಾಜಕೀಯ ಪಕ್ಷದವರು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ನಡೆಸಿದ್ದಾರೆ.
ದ.ಕ. ಜಿಲ್ಲೆ ಈಗ ಸುರಕ್ಷಿತವಾಗಿದೆಯಾ?
ಸದ್ಯ ದ.ಕ. ಜಿಲ್ಲೆ ಸುರಕ್ಷಿತವಾಗಿದೆ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಕರೊನಾ ಬಾಧಿತರೂ ಚೇತರಿಸಿಕೊಳ್ಳುತ್ತಿದ್ದಾರೆ. ದಿಲ್ಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಕ್ವಾರಂಟೈನ್‌ನಲ್ಲಿದ್ದಾರೆ. ಈ ಪೈಕಿ ಇಬ್ಬರಿಗೆ ಮಾತ್ರ ಪಾಸಿಟಿವ್ ಇತ್ತು. ಹಾಗೆಂದು ಕೇವಲ ಅಂಕೆ, ಸಂಖ್ಯೆಗಳನ್ನು ಪರಿಗಣಿಸಿ ನಾವು ಸೇಫ್ ಎನ್ನುವಂತಿಲ್ಲ್ಲ. ನಿರಂತರ ಜಾಗೃತಿ ಮುಂದುವರಿಯಬೇಕಾಗಿದೆ. ಸರ್ಕಾರ, ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಜನತೆ ಕಟ್ಟುನಿಟ್ಟಾಗಿ ಪಾಲಿಸಬೇಕು.
ಮೀನುಗಾರಿಕೆ ಆರಂಭವಾದರೆ ತೊಂದರೆಯಾಗಬಹುದೇ?
ಮೀನುಗಾರಿಕೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಅದನ್ನು ದೋಣಿಯಿಂದ ಇಳಿಸಿ, ಮಾರಾಟ ಮಾಡುವ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಚಿವರು ಸಭೆ ನಡೆಸಿ ಚರ್ಚಿಸಲಿದ್ದಾರೆ. ಬಳಿಕ ಮೀನುಗಾರಿಕೆ ಹಾಗೂ ಮಾರಾಟ ವ್ಯವಸ್ಥೆ ಸಂಬಂಧಿಸಿ ನಿಯಮ ರೂಪಿಸಲಾಗುವುದು.
ಕೇರಳದಿಂದ ರೋಗಿಗಳು ಬರಲು ಅನುಮತಿ ಕಲ್ಪಿಸಿದ ಬಗ್ಗೆ ಆತಂಕ ಇದೆಯಾ?
ಕಾಸರಗೋಡು ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಿದ ಕಾರಣ ಗಡಿ ಭಾಗವನ್ನು ಬಂದ್ ಮಾಡಲಾಗಿತ್ತು. ಜಿಲ್ಲೆಯ ಜನರ ಸುರಕ್ಷತೆಗೆ ಈ ಕ್ರಮ ಅನಿವಾರ್ಯವಾಗಿತ್ತು. ಈಗ ಕೊವಿಡ್ ಹೊರತಾಗಿ ಇತರ ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಮಂಗಳೂರಿಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಮೂರು ದಿನದಲ್ಲಿ ಆರು ಆಂಬುಲೆನ್ಸ್ ಮಾತ್ರ ಕೇರಳದಿಂದ ಬಂದಿದೆ. ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅಂತವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನಲ್ಲಿ ವೈದ್ಯಕೀಯ ವ್ಯವಸ್ಥೆ ಚೆನ್ನಾಗಿರುವುದು ನಮಗೆ ವರದಾನವಾಗಿದೆ. ಹಾಗಾಗಿ ವೆನ್ಲಾಕ್ ಆಸ್ಪತ್ರೆಯನ್ನು ಪೂರ್ಣವಾಗಿ ಕೊವಿಡ್‌ಗೆ ಮೀಸಲಿಡಲು ಸಾಧ್ಯವಾಗಿದೆ. ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯವರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಈಗ ವೆನ್ಲಾಕ್‌ಗೆ ಬರುವ ಇತರ ರೋಗಿಗಳನ್ನು ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.
- ಸಿಂಧೂ ಬಿ. ರೂಪೇಶ್, ದ.ಕ ಜಿಲ್ಲಾಧಿಕಾರಿ
ಜನತೆಗೆ ವಿನಂತಿ
ದಯವಿಟ್ಟು ಅನಗತ್ಯವಾಗಿ ತಿರುಗಾಡಬೇಡಿ. ಯಾವುದೇ ಸಮಸ್ಯೆ ಇದ್ದರೂ 1077ಗೆ ಕರೆ ಮಾಡಿ. ವೈದ್ಯಕೀಯ ಸೇವೆ ಅಗತ್ಯ ಇರುವವರಿಗೆ ಮಾತ್ರ ಪಾಸ್ ನೀಡಲಾಗುತ್ತದೆ. ಇತರ ಅಗತ್ಯ ಸೇವೆ ಇರುವವರಿಗೆ ಪಾಸ್ ವಿತರಣೆಯಾಗಿದೆ. ಅನಗತ್ಯ ನೆಪವೊಡ್ಡಿ ಪಾಸ್ ಪಡೆಯಲು ಬರಬೇಡಿ. ಮನೆಯಲ್ಲಿ ಇರುವ ಹಿರಿಯರು ಮತ್ತು ಮಕ್ಕಳ ಬಗ್ಗೆ ನಿಗಾ ವಹಿಸಿ.