ಗ್ರಾಮೀಣ ಭಾಗಗಳಲ್ಲಿ ತಂಪೆರೆದ ಮಳೆ, ಸಿಡಿಲಿಗೆ ಜಿಲ್ಲೆಯಲ್ಲಿ ಎರಡನೇ ಬಲಿ

kdb_11_rain
Published on


ಮಂಗಳೂರು: ಬಿಸಿಲಿನ ಬೇಗೆಗೆ ಬಸವಳಿದಿದ್ದ ಕರಾವಳಿಯಲ್ಲಿ ಶನಿವಾರ ಸಂಜೆಯ ವೇಳೆಗೆ ವಿವಿಧ ಕಡೆ ಪೂರ್ವ ಮುಂಗಾರಿನ ಮಳೆ ಮೊದಲ ಮುನ್ನುಡಿ ಬರೆದಿದೆ. ಇನ್ನೆರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಸಂಜೆ ಹೊತ್ತು ಗುಡುಗು ಸಿಡಿಲಿನ ಜತೆಯಲ್ಲಿ ಉತ್ತಮ ಮಳೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ ಭಾಗದ ಜತೆಯಲ್ಲಿ ಕಡಬದಲ್ಲಿ ಉತ್ತಮ ಮಳೆ, ಮರ ಬಿದ್ದು ವಿದ್ಯುತ್, ಸಂಚಾರ ವ್ಯವಸ್ಥೆಯಲ್ಲೂ ವ್ಯತ್ಯಯಗಳು ಕಾಣಿಸಿಕೊಂಡಿದೆ. ಆದರೆ ಮಂಗಳೂರು, ಮೂಡುಬಿದಿರೆ, ಬಂಟ್ವಾಳ ಭಾಗದಲ್ಲಿ ಮಳೆ ಕಾಣಿಸಿಕೊಳ್ಳದೇ ಬಿಸಿಲು, ಆಗಾಗ ಮೋಡದ ವಾತಾವರಣದಿಂದ ಸೆಕೆ ಹೆಚ್ಚಾಗಿತ್ತು.


ಹವಾಮಾನ ಇಲಾಖೆ ಶುಕ್ರವಾರವೇ ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಇದರಿಂದ ಮಳೆಯ ಸಾಧ್ಯತೆ ಮತ್ತಷ್ಟು ದಟ್ಟವಾಗಿದೆ. ಒಂದೆರಡು ದಿನಗಳಲ್ಲಿ ಕರಾವಳಿಯಲ್ಲಿ ಪೂರ್ಣ ರೂಪದಲ್ಲಿ ಮಳೆ ಕಾಣಿಸಿಕೊಳ್ಳಲಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಡಿಲಿಗೆ 2ನೇ ಬಲಿ
ಜಿಲ್ಲೆಯಲ್ಲಿ ಪೂರ್ವ ಮುಂಗಾರಿನ ಸಿಡಿಲಿಗೆ 2ನೇ ಬಲಿಯಾಗಿದೆ. ಕಡಬ ತಾಲೂಕಿನ ಇಚಿಲಂಪಾಡಿಯಲ್ಲಿ ಬಿಹಾರ ಮೂಲದ ಶ್ರೀಕಿಸೂನ್ (54) ಮೃತಪಟ್ಟಿದ್ದಾರೆ. ನದಿಯಿಂದ ಮರಳು ತೆಗೆಯುವ ಕೆಲಸ ಮಾಡುತ್ತಿದ್ದ ಇವರು ಶೆಡ್‌ನಲ್ಲಿ ವಾಸವಿದ್ದರು. ಇವರ ಜತೆಗಿದ್ದ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಮೇ 3ರಂದು ನವವಿವಾಹಿತ ಸೋಮಸುಂದರ (34) ಎಂಬವರು ಮೃತಪಟ್ಟಿದ್ದರು. ಸಿಡಿಲು ಬರುವಾಗ ಸಾರ್ವಜನಿಕರು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net