

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ದಟ್ಟ ಮೋಡ ಕವಿದು ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಜು.9ರಿಂದ 11ರ ತನಕ ಆರೆಂಜ್ ಅಲರ್ಟ್ ಘೋಷಿಸಿದ್ದು, ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದು, 12ರಂದು ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಂಗಳವಾರದಿಂದ ಗುರುವಾರದ ತನಕ ಸುರಿದ ಧಾರಾಕಾರ ಮಳೆಯಿಂದ ಹಲವು ಕಡೆ ಬಂದಿದ್ದ ನೆರೆ ಶುಕ್ರವಾರ ಮಳೆ ವಿರಾಮ ಘೋಷಿಸಿದ್ದ ಕಾರಣ ನೀರು ಇಳಿಕೆಯಾಗಿತ್ತು. ಶನಿವಾರ ಮತ್ತೆ ಮಳೆ ಬಿರುಸು ಪಡೆದುಕೊಂಡಿದೆ. ತಗ್ಗು ಪ್ರದೇಶದ ಜನರು ಮತ್ತೆ ಆತಂಕಕ್ಕೊಳಗಾಗಿದ್ದಾರೆ.
ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ತಾಲೂಕುಗಳಲ್ಲಿ ದಿನವಿಡೀ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಮಂಗಳೂರು, ಮೂಡುಬಿದಿರೆ ಮೊದಲಾದ ಕಡೆ ದಟ್ಟ ಮೋಡ ಕವಿದು ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ. ಉಪ್ಪಿನಂಗಡಿಯಲ್ಲಿ ಸತತ ಹಗುರದಿಂದ ಸಾಧಾರಣ ಮಳೆಯಾಗಿದೆ. ರಸ್ತೆಗೆ ಮರ ಬಿದ್ದು ಸಂಚಾರ ಸ್ಥಗಿತ, ಬರೆ ಕುಸಿತ ಘಟನೆಗಳು ಬಿಟ್ಟರೆ ಗಂಭೀರ ಸ್ವರೂಪದ ಹಾನಿ ವರದಿಯಾಗಿಲ್ಲ.
ಮಂಗಳೂರಿನ ನಗರ ಭಾಗದ ಹಂಪನಕಟ್ಟೆಯ ವಿವಿ ಕಾಲೇಜಿನ ಆವರಣದ ಮರದ ರೆಂಬೆಯೊಂದು ಪುಟ್‌ಪಾತ್‌ಗೆ ಮುರಿದು ಬಿದ್ದಿರುವುದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ಸಮಸ್ಯೆಯಾಗಿತ್ತು. ಆದರೆ ಈ ಬಳಿಕ ಇದರ ತೆರವು ಮಾಡಲಾಗಿದೆ. ಉಳಿದಂತೆ ಸಣ್ಣ ಪುಟ್ಟ ಹಾನಿ ಸಂಭವಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾಗದ ಶವ: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಹೊನ್ನೇಡಿ ಕಾಲು ಸಂಕದಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕ ನಾರಾಯಣ ಅವರು ಮೂರು ದಿನವಾದರೂ ಪತ್ತೆಯಾಗಿಲ್ಲ. ಅಗ್ನಿಶಾಮಕದಳ, ಎಸ್‌ಡಿಆರ್‌ಎಫ್, ಎಸ್‌ಕೆಎಸ್‌ಎಸ್‌ಎಫ್, ವಿಖಾಯ ತಂಡದವರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಹೊಳೆಯಲ್ಲಿ ನೀರು ಕಡಿಮೆಯಾಗಿದ್ದು, ಶನಿವಾರ ಸಂಜೆಯ ತನಕ ಯಾವುದೇ ಕುರುಹು ಪತ್ತೆಯಾಗಿಲ್ಲ.
24 ಗಂಟೆ ಅವಧಿಯಲ್ಲಿ ಹಾನಿ ವಿವರ: ಶನಿವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಬಂಟ್ವಾಳದಲ್ಲಿ 1 ಮನೆ ಸಂಪೂರ್ಣ, ಬಂಟ್ವಾಳ, ಕಡಬ, ಉಳ್ಳಾಲದಲ್ಲಿ ತಲಾ ಒಂದೊಂದು ಮನೆಗಳು ಭಾಗಶಃ ಹಾನಿಗೀಡಾಗಿವೆ. 32 ವಿದ್ಯುತ್ ಕಂಬಗಳು, 1.40 ಕಿ.ಮೀ. ವಿದ್ಯುತ್ ತಂತಿ, 3 ಸೇತುವೆಗಳಿಗೆ ಹಾನಿ ಉಂಟಾಗಿದೆ. ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದ್ದು 5.7 ಮೀ. ನೀರಿನ ಮಟ್ಟವಿತ್ತು. ಇದರ ಅಪಾಯ ಮಟ್ಟ 8.5 ಮೀ. ಆಗಿದೆ.
ಮೀನುಗಾರರಿಗೆ ಎಚ್ಚರಿಕೆ: ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿ ಗಂಟೆಗೆ 45 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮೂಡುಬಿದಿರೆ, ಸುಳ್ಯದಲ್ಲಿ ಜಾಸ್ತಿ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆಯಲ್ಲಿ 78.8 ಮಿ.ಮೀ ಹಾಗೂ ಸುಳ್ಯದಲ್ಲಿ 67.3 ಮಿ.ಮೀ ಮಳೆಯಾಗಿದೆ. ಉಳಿದಂತೆ ಬಂಟ್ವಾಳದಲ್ಲಿ 63.5 ಮಿ.ಮೀ, ಕಡಬದಲ್ಲಿ 60.5 ಮಿ.ಮೀ., ಮಂಗಳೂರಿನಲ್ಲಿ 62 ಮಿ.ಮೀ., ಬೆಳ್ತಂಗಡಿಯಲ್ಲಿ 60.6 ಮಿ.ಮೀ, ಪುತ್ತೂರು 55 ಮಿ.ಮೀ. ಮಳೆಯಾಗಿದೆ.