

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದು ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಕಡಬ ಹಾಗೂ ಮಂಗಳೂರಿನಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ವಿವಿಧ ಕಡೆಗಳಲ್ಲಿ ಹಾನಿಯ ಪ್ರಕರಣಗಳು ಮುಂದುವರಿದಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರಿನಲ್ಲಿ ಹೆಚ್ಚು ಮಳೆ: ಕಳೆದ 24 ಗಂಟೆಗಳ ಲೆಕ್ಕಚಾರದಲ್ಲಿ ಮಂಗಳೂರಿನಲ್ಲಿ 67 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 33.2 ಮಿ.ಮೀ, ಬಂಟ್ವಾಳದಲ್ಲಿ 37.6 ಮಿ.ಮೀ, ಪುತ್ತೂರು 28 ಮಿ.ಮೀ, ಸುಳ್ಯದಲ್ಲಿ 18.2 ಮಿ.ಮೀ, ಮೂಡುಬಿದಿರೆ 38 ಮಿ.ಮೀ, ಕಡಬದಲ್ಲಿ 24.1 ಮಿ.ಮೀ, ಮೂಲ್ಕಿಯಲ್ಲಿ 39.2 ಮಿ.ಮೀ ಹಾಗೂ ಉಳ್ಳಾಲ 32 ಮಿ.ಮೀ ಮಳೆ ಬಂದಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಮಟ್ಟ 3.4 ಮೀ.ಗೆ ಇಳಿಕೆಯಾಗಿದೆ.
ತಡೆಗೋಡೆ ಕುಸಿತ ಮನೆ ಜಖಂ: ಮಂಗಳೂರಿನ ಬಜಾಲ್ ಪಲ್ಲಕೆರೆ ಗಾನದ ಬೆಟ್ಟು ರಾಧಾಕೃಷ್ಣ ಅವರ ಮನೆಗೆ ಪಕ್ಕದಲ್ಲಿರುವ ಲೇ ಔಟ್‌ವೊಂದರ ತಡೆಗೋಡೆ ಕುಸಿತವಾಗಿ ಮನೆಯ ಒಂದು ಭಾಗ ಪೂರ್ಣ ಜಖಂಗೊಂಡಿದೆ. ರಾಧಾಕೃಷ್ಣ ಅವರು ತಮ್ಮ ಮನೆಯನ್ನು ಬಾಡಿಗೆದಾರರಿಗೆ ನೀಡಿದ್ದರು. ಇದರಲ್ಲಿ ಒಂದು ಮನೆಯಲ್ಲಿ ತಾಯಿ, ಮಗು ತಡೆಗೋಡೆ ಕುಸಿತ ಶಬ್ದ ಕೇಳಿ ಹೊರಬಂದ ಕಾರಣ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮೂರು ಬಾರಿ ತಡೆಗೋಡೆಯ ಮಣ್ಣು ಕುಸಿತವಾಗಿದ್ದು ಈ ಸಂಬಂಧ ಮನಪಾಕ್ಕೆ ದೂರು ಕೊಟ್ಟು ಅಧಿಕಾರಿಗಳು ಬಂದರೂ ಕೂಡ ಕ್ರಮ ಜರುಗಿಸದೇ ಮರಳಿದ್ದಾರೆ. ಈ ಬಾರಿ ತಡೆಗೋಡೆ, ಮೋರಿ ಸೇರಿದಂತೆ ಮಣ್ಣು ಪೂರ್ಣವಾಗಿ ಮನೆಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.