ನೂತನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧಿಕಾರ ಸ್ವೀಕಾರ

mng--17 june mullai mugilan
Published on


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಶನಿವಾರ ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.


2013ರ ಐಎಎಸ್ ಬ್ಯಾಚ್‌ನ ಅಧಿಕಾರಿಯಾಗಿರುವ ಮುಲ್ಲೈ ಮುಗಿಲನ್ ಅವರು ಬೆಂಗಳೂರಿನ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಅದಕ್ಕೂ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.


ಆಡಳಿತದಲ್ಲಿ ಸಮನ್ವಯತೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಇದೆ. ದಕ್ಷಿಣ ಕನ್ನಡ ತನ್ನದೇ ರೀತಿಯಲ್ಲಿ ವಿಶಿಷ್ಟವಾದ ಜಿಲ್ಲೆ. ಇಲ್ಲಿ ಕೆಲಸ ಮಾಡುವುದು ಉತ್ತಮ ಅವಕಾಶ ಎಂದು ಭಾವಿಸಿದ್ದೇನೆ. ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿನ ಜನರು ಹಲವು ರೀತಿಯ ಚಿಂತನೆ ಇರುವವರು. ನಮ್ಮ ಕೆಲಸ ಇಲ್ಲಿನ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಆಡಳಿತದಲ್ಲಿ ಸಮನ್ವಯತೆ ಸಾಧಿಸುವುದು. ವೈಯಕ್ತಿಕವಾಗಿಯೂ, ವೃತ್ತಿಜೀವನದಲ್ಲೂ ಈ ಜಿಲ್ಲೆಯಲ್ಲಿ ಕೆಲಸ ಮಾಡುವುದು ಒಂದು ಮೈಲಿಗಲ್ಲು ಅಂದುಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.


ಜಿಲ್ಲೆಯಲ್ಲಿ ಕೋಮು ಸಾಮರಸ್ಯ ನೆಲೆಗೊಳಿಸುವ ಸವಾಲಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಲ್ಲೈ ಮುಗಿಲನ್, ಇದು ಬಹಳಷ್ಟು ಅವಕಾಶಗಳು ತುಂಬಿರುವ ಜಿಲ್ಲೆ. ಅನೇಕ ಉದ್ಯಮಗಳಿವೆ, ಸಂಸ್ಥೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ದೇಶದ ಹೆಲ್ತ್‌ಕೇರ್ ಸೆಂಟರ್ ಆಗಬಹುದಾದ ಸಾಧ್ಯತೆ ಇರುವ ಜಿಲ್ಲೆ. ಇಲ್ಲಿನ ಸಮನ್ವಯತೆಯ ಕೊರತೆಗಳನ್ನು ಸರಿದೂಗಿಸಿಕೊಂಡು ಹೋಗಬೇಕಿದೆ. ಜಿಲ್ಲೆಯ ಜನರ ಜತೆ ಸಂಪರ್ಕದಲ್ಲಿದ್ದುಕೊಂಡು ಎಲ್ಲರ ಅಭಿಪ್ರಾಯಗಳನ್ನು ಪಡೆದು ಸಮನ್ವಯದ ಕೊರತೆಯನ್ನು ಸರಿಪಡಿಸುವ ಕೆಲಸ ಆಗಬೇಕಿದೆ.


ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡ ಇದೆ. ಅವರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಜನರು ಪ್ರಜ್ಞಾವಂತರಿರುವುದರಿಂದ ಅಧಿಕಾರಿಗಳ ಜತೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೊಣೆಗಾರಿಕೆಯಿಂದ ಅಧಿಕಾರಿಗಳು ಜನಸಾಮಾನ್ಯರಿಗೆ ತ್ವರಿತ ಸ್ಪಂದನೆ ನೀಡಬೇಕು. ಜಿಲ್ಲೆಯ ಬಗ್ಗೆ ಸಮಗ್ರ ಚಿತ್ರಣ ಪಡೆದು ಎಲ್ಲ ತಾಲೂಕುಗಳಿಗೆ ಭೇಟಿ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net