

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆಗಳು ಪೂರ್ಣಗೊಂಡಿದ್ದು, ಏ.26ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ 8 ವಿಧಾನ ಸಭಾ ಕ್ಷೇತ್ರದ 1876 ಮತಗಟ್ಟೆಯ ಮೂಲಕ 18,18,127 ಮತದಾರರು ಮತದಾನ ಮಾಡಲಿದ್ದಾರೆ.
524 ಸರ್ವಿಸ್ ಮತದಾರರ ಜತೆಗೆ 9,30,928 ಮಹಿಳಾ ಹಾಗೂ 8,87,122 ಮಂದಿ ಪುರುಷ ಮತದಾರರಿದ್ದಾರೆ. ಇದಕ್ಕೆ 11,255 ಮಂದಿ ಮತಗಟ್ಟೆ ಅಧಿಕಾರಿ/ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಇದರಲ್ಲಿ 8 ವಿಧಾನ ಸಭಾ ಕ್ಷೇತ್ರಕ್ಕೆ 2,251 ಮಂದಿ ಪಿಆರ್‌ಒ, 2,251 ಎಪಿಆರ್‌ಒ, 4,502 ಮಂದಿ ಪಿಒ ಹಾಗೂ 2,251 ಮಂದಿ ಗ್ರೂಪ್ ಡಿ ಸಿಬ್ಬಂದಿಗಳನ್ನು ಚುನಾವಣೆಗೆ ನೇಮಿಸಲಾಗಿದೆ ಎಂದು ದ.ಕ. ಜಿಲ್ಲಾ ಚುನಾವಣಾಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
72 ಮಾದರಿ ಮತಗಟ್ಟೆಗಳು: ದಕ ಜಿಲ್ಲೆಯಲ್ಲಿ ಈ ಬಾರಿ ಚುನಾವಣೆಗೆ 8 ವಿಧಾನ ಸಭಾ ಕ್ಷೇತ್ರಕ್ಕೆ 72 ಮಾದರಿ ಮತಗಟ್ಟೆಗಳನ್ನು ಮಾಡಲಾಗಿದ್ದು, ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಖಿ ಬೂತ್‌ಗಳಂತೆ ಒಟ್ಟು 40 ಸಖಿ ಬೂತ್‌ಗಳು ಹಾಗೂ ಪ್ರತಿ ವಿಧಾನ ಸಭೆಗೆ ತಲಾ ಒಂದು ಇತರ ವಿಶೇಷ ಬೂತ್‌ಗಳಲ್ಲಿ 8 ಪಿಡಬ್ಲ್ಯೂಡಿ, 8 ಯುವ ಬೂತ್, 8 ಧ್ಯೇಯ ಬೂತ್‌ಗಳು ಹಾಗೂ 8 ಸಾಂಪ್ರದಾಯಿಕ ಬೂತ್‌ಗಳನ್ನು ಮಾಡಲಾಗಿದೆ ಎಂದರು.
ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ: 8 ವಿಧಾಸಭಾ ಕ್ಷೇತ್ರಗಳಿಗೆ ಅನುಗುಣವಾಗಿ ಈ ಬಾರಿಯ ಲೋಕಸಭಾ ಚುನಾವಣೆಗೆ ಮೈಕ್ರೋ ಅಬ್ಸರ್‌ವರ್, ವೆಬ್‌ಕಾಸ್ಟಿಂಗ್, ಸಿಎಪಿಎ್ಗಳನ್ನು ನೇಮಕಮಾಡಲಾಗಿದೆ. ಇದರಲ್ಲಿ 938 ಕಡೆಯಲ್ಲಿ ವೆಬ್‌ಕಾಸ್ಟಿಂಗ್ ಹಾಗೂ 200 ಮೈಕ್ರೋ ಅಬ್ಸರ್‌ವರ್ ಅವರನ್ನು ನೇಮಕಮಾಡಲಾಗಿದೆ. ಇದರ ಜತೆಯಲ್ಲಿ ಮಾದರಿ ನೀತಿ ಸಂಹಿತೆಯ ಪಾಲನೆಗಾಗಿ ಅಧಿಕಾರಿಗಳ ನೇಮಕ ಮಾಡಲಾಗಿದೆ. ಇದರ ಜತೆಗೆ ಮತಗಟ್ಟೆ ಸಿಬ್ಬಂದಿಗಳಿಗೆ ಅಗತ್ಯವಿರುವ ವಾಹನಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಶಾಲೆಗಳ ವಾಹನಗಳನ್ನು ಕೂಡ ಬಳಸಲಾಗುತ್ತಿದೆ. ಇದರ ಜತೆಗೆ 280 ಸರ್ಕಾರಿ ಬಸ್, 13 ಖಾಸಗಿ ಹಾಗೂ 140 ಮ್ಯಾಕ್ಸಿ ಕ್ಯಾಬ್, 62 ಮಿನಿ ಬಸ್ ಸೇರಿದಂತೆ ಒಟ್ಟು 627 ವಾಹನಗಳನ್ನು ಸಿದ್ಧಪಡಿಸಲಾಗಿದೆ ಎಂದರು. ಇದರ ಜತೆಗೆ ಹೆಚ್ಚುವರಿಯಾಗಿ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಕೂಡ ಇಟ್ಟುಕೊಳ್ಳಲಾಗಿದೆ ಎಂದರು.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳ ಸ್ಥಾಪನೆ: ಈ ಬಾರಿಯ ಲೋಕಸಭಾ ಚುನಾವಣೆಗೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 8 ಕಡೆಯಲ್ಲಿ ಮಸ್ಟರಿಂಗ್ ಡಿ ಮಸ್ಟರಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಕಂಟ್ರೋಲ್ ರೂಂ ಹಾಗೂ 1950 ಟೋಲ್ ಫ್ರೀ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಂಟ್ರೋಲ್ ರೂಂಗಳನ್ನು ಮಾಡಲಾಗಿದೆ. ಶೇ.70ರಷ್ಟು ಚುನಾವಣಾ ಸಿಬ್ಬಂದಿಗಳು ಮಹಿಳೆಯರಾಗಿದ್ದು, ಅದಕ್ಕಾಗಿ ಅವರು ಕಾರ‌್ಯ ನಿರ್ವಹಣೆ ಮಾಡುತ್ತಿರುವ ತಾಲೂಕುಗಳಲ್ಲಿಯೇ ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದ್ದು, ಪುರುಷರಿಗೆ ಮಾತ್ರ ಇತರ ಕಡೆಗೆಗಳಿಗೆ ನಿಯೋಜನೆ ಮಾಡಲಾಗಿದೆ ಎಂದರು.
17,72,641 ಮತದಾನ ಚೀಟಿ ವಿತರಣೆ:
26ರಂದು ಬೆಳಗ್ಗೆ 7ರಿಂದ ಸಂಜೆ 6ರ ತನಕ ಚುನಾವಣೆ ನಡೆಯಲಿದ್ದು, ಇದಕ್ಕೆ ಎಪಿಕ್ ಕಾರ್ಡ್ ಜತೆಗೆ ಚುನಾವಣಾ ಆಯೋಗ ನಿಗದಿ ಮಾಡಿದ ದಾಖಲೆಗಳನ್ನು ತೋರಿಸಿ ಮತ ಚಲಾವಣೆ ಮಾಡಬಹುದು. ಈಗಾಗಲೇ ಜಿಲ್ಲೆಯಲ್ಲಿ 17,72,641 ಮತದಾನ ಚೀಟಿ ವಿತರಣೆ ಮಾಡಲಾಗಿದೆ. ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣಕ್ಕೆ ಕ್ಯೂಆರ್ ಕೋಡ್ ಇರುವ ಮತದಾರರ ಚೀಟಿ ವಿತರಣೆ ಮಾಡಲಾಗಿದ್ದು ಸ್ಕಾೃನ್ ಮಾಡಿದಾಗ ಅದು ಮತಗಟ್ಟೆಯ ದಾರಿಯನ್ನು ತೋರಿಸುತ್ತದೆ ಎಂದರು.
ಇಂದು ಬಹಿರಂಗ ಪ್ರಚಾರ ಅಂತ್ಯ: ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರವನ್ನು ಮುಕ್ತಾಯಗೊಳಿಸಬೇಕು. ಏ.24ರ ಸಂಜೆ 6ರಿಂದ ಸಾರ್ವಜನಿಕ ಸಭೆ, ರ‌್ಯಾಲಿಗಳು, ಬೀದಿ ನಾಟಕಗಳು ಇತ್ಯಾದಿ ಬಹಿರಂಗ ಪ್ರಚಾರವನ್ನು ಮುಕ್ತಾಯಗೊಳಿಸಬೇಕು. ಪ್ರಚಾರ ಗಡುವು ಮುಗಿದ ನಂತರ ಚುನಾವಣಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ‌್ಯಕರ್ತರು ಆ ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಇದರ ಜತೆಗೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಮತದಾರರಿಗೆ ಮತಗಟ್ಟೆಗಳಿಗೆ ಕರೆದುಕೊಂಡು ಬರಲು ಮತ್ತು ಹೋಗಲು ವಾಹನದ ವ್ಯವಸ್ಥೆ ಮಾಡುವಂತಿಲ್ಲ. ಮತದಾನದ ದಿನ ಸರ್ಕಾರಿ/ ಖಾಸಗಿ ವಲಯದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಇದರ ಜತೆಗೆ ಏ.24ರ ಸಂಜೆ 6ರಿಂದ 144 ಸೆಕ್ಷನ್ ಕೂಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಇದು ಚುನಾವಣೆ ಮುಗಿಯುವ ತನಕ ಇರಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್, ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್, ದಕ ಎಸ್ಪಿ ಸಿ.ಬಿ. ರಿಷ್ಯಂತ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.