

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಹವಾ ಜೋರಾಗಿದೆ. ಈ ಕಾರಣದಿಂದ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.
ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವಿಧಾನಸಭಾಚುನಾವಣೆಯಲ್ಲಿ ಪ್ರಣಾಳಿಕೆಯಂತೆ ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸಿ ಭರವಸೆ ಈಡೇರಿಸಿದೆ. ಕೇಂದ್ರದಲ್ಲಿ ಮತ್ತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದ್ದು, ಇದನ್ನು ಅನುಷ್ಠಾನಗೊಳಿಸುವ ಭರವಸೆಯೂ ಮತದಾರರಿಗೆ ಮೂಡಿದೆ ಎಂದರು.
33 ವರ್ಷಗಳಿಂದ ಕ್ಷೇತ್ರವನ್ನು ಗೆದ್ದಿರುವ ಬಿಜೆಪಿ ಪಾಳಯದಲ್ಲಿ ಭಯ ಶುರುವಾಗಿದೆ. ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಅವರನ್ನೇ ಕರೆಸಿದರೂ ಅವರು ಮನಪೂರ್ವಕವಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಹಿಂದಿನಂತೆ ಜನ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ ಎಂದರು.
ಪ್ರಧಾನಿ ಮೋದಿಯವರು ಹತಾಶೆಗೊಂಡಿರುವುದು ಚುನಾವಣಾ ಪ್ರಚಾರದ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ. ಅವರು ಓರ್ವ ಪ್ರಧಾನಿಯಾಗಿ ಮಾತನಾಡುತ್ತಿಲ್ಲ. ಕಾಂಗ್ರೆಸ್‌ನವರು ಮಂಗಳಸೂತ್ರ ಕಸಿಯುತ್ತಾರೆ. ಮುಸ್ಲಿಮರಿಗೆ ಆಸ್ತಿ ಹಂಚಿಕೆ ಮಾಡುತ್ತಾರೆ. ದಲಿತ ಮೀಸಲಾತಿ ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎಂಬೆಲ್ಲಾ ಮಾತುಗಳನ್ನು ದಾಖಲೆ ರಹಿತವಾಗಿ ಪ್ರಧಾನಿ ಊಹೆ ಮಾಡುತ್ತಿರುವುದು ವಿಷಾದನೀಯ ಎಂದರು.
ಮಂಗಳಸೂತ್ರದ ಬಗ್ಗೆ ಮಾತನಾಡುವ ಪ್ರಧಾನಿಯವರಿಗೆ ಮಣಿಪುರ ಸಂಘರ್ಷದಲ್ಲಿ ಹುತಾತ್ಮರಾದವರ ಪತ್ನಿಯರ ಮಂಗಳಸೂತ್ರದ ನೆನಪಾಗಿಲ್ಲ. ಕೊರೋನಾ, ನೋಟ್‌ಬ್ಯಾನ್‌ನಲ್ಲಿ ಮೃತಪಟ್ಟವರ ಮಂಗಳಸೂತ್ರದ ಬಗ್ಗೆ ಅರಿವಿಲ್ಲ ಎಂದು ಹರೀಶ್ ಕುಮಾರ್ ಹೇಳಿದರು.
ಮಾಜಿ ಮೇಯರ್ ಕವಿತಾ ಸನಿಲ್ ಬಿಜೆಪಿ ಸೇರ್ಪಡೆಯ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಈ ವಿಷಯವನ್ನು ದೊಡ್ಡ ವಿಷಯವಾಗಿ ಪರಿಗಣಿಸಿಯೇ ಇಲ್ಲ. ಜೆಡಿಎಸ್‌ನ ಸಾಕಷ್ಟು ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಬಲ ತುಂಬಿದ್ದಾರೆ. ಅವರು ಪಕ್ಷ ತ್ಯಜಿಸಿದರೆ ಯಾವುದೇ ನಷ್ಟವಿಲ್ಲ ಎಂದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ನೋಟಾ ಅಭಿಯಾನ ಪಕ್ಷದ ಅಭ್ಯರ್ಥಿ ಗೆಲುವಿಗೆ ಪರಿಣಾಮ ಬೀರದು. ನಾವು ಅದರ ಬಗ್ಗೆ ಗಮನಿಸಿಲ್ಲ, ಆ ಬಗ್ಗೆ ಚರ್ಚಿಸಲೂ ಇಷ್ಟಪಡುವುದಿಲ್ಲ ಎಂದರು.
ಮುಖಂಡರಾದ ಮಹಾಬಲ ಮಾರ್ಲ, ನೀರಜ್ ಪಾಲ್, ಟಿ.ಎಂ. ಶಾಹಿದ್, ಜಿತೇಂದ್ರ, ಮುಹಮ್ಮದ್, ಶುಭೋದಯ ಆಳ್ವ ಉಪಸ್ಥಿತರಿದ್ದರು.